ಕರಾವಳಿ ವಾಯ್ಸ್ ನ್ಯೂಸ್
ಕಾಣಕೋಣ (ಗೋವಾ): ಕಾರವಾರದ ಸರಕಾರಿ ಡಿಪ್ಲೊಮಾ ಕಾಲೇಜಿನ ವಿದ್ಯಾರ್ಥಿಯೋರ್ವ ಗೆಳೆಯರೊಂದಿಗೆ ಗೋವಾದ ಪೋಲೆಂ ಕಡಲತೀರಕ್ಕೆ ಈಜಲು ತೆರಳಿ ಸಮುದ್ರದ ಅಲೆಗಳ ರಭಸಕ್ಕೆ ಸಿಲುಕಿ ನಾಪತ್ತೆಯಾಗಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ನಾಪತ್ತೆಯಾದ ವಿದ್ಯಾರ್ಥಿಗಾಗಿ ಗೋವಾ ಪೊಲೀಸರು ಹೆಲಿಕಾಪ್ಟರ್ ಸಹಾಯದಿಂದ ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದಾರೆ.
ನಾಪತ್ತೆಯಾದ ವಿದ್ಯಾರ್ಥಿಯನ್ನು ಅಂಕೋಲಾ ತಾಲೂಕಿನ ಬೆಳಾಬಂದರ್ ಗ್ರಾಮದ ನಿವಾಸಿ, ಕಾರವಾರದ ಸರಕಾರಿ ಡಿಪ್ಲೊಮಾ ಕಾಲೇಜಿನ ಇಲೆಕ್ಟ್ರಿಕಲ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ವಿಘ್ನೇಶ್ವರ ಪ್ರಕಾಶ ನಾಯ್ಕ (20) ಎಂದು ಗುರುತಿಸಲಾಗಿದೆ. ಈತ ತನ್ನ ಇಬ್ಬರು ಗೆಳೆಯರೊಂದಿಗೆ ಶುಕ್ರವಾರ ಬೆಳಿಗ್ಗೆ ಸುಮಾರು 11 ಗಂಟೆ ವೇಳೆಗೆ ಕರ್ನಾಟಕ–ಗೋವಾ ಗಡಿಯ ಸಮೀಪವಿರುವ ಪೋಲೆಂ ಕಡಲತೀರಕ್ಕೆ ತೆರಳಿದ್ದಾನೆ ಎಂದು ತಿಳಿದುಬಂದಿದೆ.
ಸಾಕ್ಷಿಗಳ ಪ್ರಕಾರ, ಮೂವರು ಸ್ನೇಹಿತರು ಸಮುದ್ರಕ್ಕೆ ಇಳಿದು ಈಜಲು ಮುಂದಾದ ಸಂದರ್ಭದಲ್ಲಿ ಅಲೆಗಳ ತೀವ್ರ ರಭಸ ಹೆಚ್ಚಾಗಿ, ವಿಘ್ನೇಶ್ವರ ಅಲೆಗಳ ಸೆಳೆತಕ್ಕೆ ಸಿಲುಕಿ ಕಣ್ಮರೆಯಾಗಿದ್ದಾನೆ. ಜೊತೆಯಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಹೇಗೋ ತೀರಕ್ಕೆ ಮರಳಲು ಯಶಸ್ವಿಯಾಗಿದ್ದು, ಅವರು ಸುರಕ್ಷಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಘ್ನೇಶ್ವರ ಪ್ರಕಾಶ ನಾಯ್ಕ ತನ್ನ ಪೋಷಕರಿಗೆ “ಕಾಲೇಜಿನ ಪ್ರವಾಸಕ್ಕೆ ತೆರಳುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟಿದ್ದಾನೆ ಎನ್ನಲಾಗಿದೆ. ಪ್ರಕಾಶ ನಾಯ್ಕ ದಂಪತಿಗಳಿಗೆ ಒಬ್ಬನೇ ಮಗನಾಗಿದ್ದ ವಿಘ್ನೇಶ್ವರನ ನಾಪತ್ತೆ ಸುದ್ದಿ ತಿಳಿದ ಕೂಡಲೇ ಬೆಳಾಬಂದರ್ ಗ್ರಾಮದಲ್ಲಿ ಶೋಕ ವಾತಾವರಣ ಆವರಿಸಿದೆ. ಸರಳ ಸ್ವಭಾವ, ಸಜ್ಜನಿಕೆ ಮತ್ತು ಎಲ್ಲರೊಂದಿಗೆ ಬೆರೆತು ನಡೆಯುವ ಗುಣಗಳಿಂದ ಗ್ರಾಮಸ್ಥರ ಪ್ರೀತಿ ಗಳಿಸಿದ್ದ ಯುವಕನಾಗಿ ವಿಘ್ನೇಶ್ವರ ಪರಿಚಿತರಾಗಿದ್ದನು.
ಘಟನೆ ಕುರಿತು ತಕ್ಷಣ ಮಾಹಿತಿ ಪಡೆದ ಗೋವಾ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಕರಾವಳಿ ಕಾವಲು ಪಡೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಶೋಧ ಕಾರ್ಯ ಆರಂಭಿಸಿದರು. ಸಮುದ್ರದ ಅಲೆಗಳ ವೇಗ ಮತ್ತು ಗಾಳಿ ತೀವ್ರತೆಯಿಂದ ಶೋಧ ಕಾರ್ಯಕ್ಕೆ ಅಡಚಣೆ ಎದುರಾದ ಕಾರಣ, ಸಂಜೆ ಕತ್ತಲೆ ಆವರಿಸುತ್ತಿದ್ದಂತೆ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಶನಿವಾರ ಬೆಳಿಗ್ಗೆಯಿಂದಲೇ ಮತ್ತೆ ಶೋಧ ಕಾರ್ಯ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಯ ಶೋಧ ಕಾರ್ಯಕ್ಕಾಗಿ ಸಮುದ್ರದ ಮೇಲ್ಭಾಗವನ್ನು ಹೆಲಿಕಾಪ್ಟರ್ ಮೂಲಕ ಪರಿಶೀಲಿಸಲಾಗುತ್ತಿದ್ದು, ದೋಣಿಗಳ ಸಹಾಯದಿಂದ ಕರಾವಳಿಯ ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಶೀಲಿಸಲಾಗುತ್ತಿದೆ. ಈ ಕುರಿತು ಕಾಣಕೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಘಟನೆಯ ಹಿನ್ನೆಲೆ, ಸಮುದ್ರದಲ್ಲಿ ಈಜುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕೆಂಬ ಅಗತ್ಯತೆಯ ಕುರಿತು ಮತ್ತೊಮ್ಮೆ ಎಚ್ಚರಿಕೆ ವ್ಯಕ್ತವಾಗಿದೆ. ಪ್ರವಾಸಿ ತಾಣಗಳಲ್ಲಿ ಎಚ್ಚರಿಕೆ ಸೂಚನೆಗಳಿದ್ದರೂ ನಿರ್ಲಕ್ಷ್ಯದಿಂದ ಇಳಿಯುವ ಘಟನೆಗಳು ಜೀವಹಾನಿಗೆ ಕಾರಣವಾಗುತ್ತಿರುವುದು ವಿಷಾದನೀಯ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
