ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ದೆಹಲಿಯ ಕೆಂಪುಕೋಟೆಯ ಬಳಿ ಸಂಭವಿಸಿದ ಕಾರ್ ಬ್ಲಾಸ್ಟ್ ಘಟನೆ ದೇಶದಾದ್ಯಂತ ಆತಂಕ ಸೃಷ್ಟಿಸಿದ್ದು, ಅದರ ಪರಿಣಾಮ ಈಗ ಕರಾವಳಿಗೂ ತಲುಪಿದೆ. ಕಾರವಾರ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ, ಎಲ್ಲೆಡೆ ಕಟ್ಟು ನಿಟ್ಟಿನ ಭದ್ರತೆ!
ಮಂಗಳವಾರ ಬೆಳಗ್ಗೆಯಿಂದಲೇ ಕಾರವಾರ ನಗರದ ಪ್ರಮುಖ ಪ್ರದೇಶಗಳಲ್ಲಿ ಶ್ವಾನ ದಳ ಹಾಗೂ ಬಾಂಬ್ ಸ್ಕ್ವಾಡ್ ತಂಡಗಳ ಓಡಾಟ ಕಂಡುಬಂತು. ರೈಲು ನಿಲ್ದಾಣಗಳು, ದೇವಸ್ಥಾನಗಳು, ನ್ಯಾಯಾಲಯ, ಬಂದರು ಪ್ರದೇಶ – ಎಲ್ಲೆಡೆ ತಪಾಸಣೆ ತೀವ್ರಗೊಂಡಿದೆ. ರಾತ್ರಿ ವರೆಗೆ ಕಾರವಾರ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಕ್ವಾಡ್ ತಪಾಸಣೆ ಮುಂದುವರಿಯಿತು.
ಗೋವಾ ಗಡಿಭಾಗದ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಸಹ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ, ಒಳಬರುವ ಪ್ರತಿಯೊಂದು ವಾಹನದ ನಿಖರ ತಪಾಸಣೆ ನಡೆಯುತ್ತಿದೆ. ದ್ವಿಚಕ್ರ ವಾಹನದಿಂದ ಲಾರಿವರೆಗೂ ಯಾರಿಗೂ ವಿನಾಯಿತಿ ಇಲ್ಲ!
ನೌಕಾದಳದ ಕದಂಬ ನೆಲೆ ಇರುವುದರಿಂದ ಕಾರವಾರ ಪೊಲೀಸರಿಂದ ಹೆಚ್ಚುವರಿ ಮುತುವರ್ಜಿ ವಹಿಸಲಾಗಿದ್ದು, ಬಂದರು ಪ್ರದೇಶಕ್ಕೆ ಆಗಮಿಸುವ ಎಲ್ಲ ಹಡಗುಗಳಿಗೂ ಕಟ್ಟುನಿಟ್ಟಿನ ಭದ್ರತಾ ತಪಾಸಣೆ ನಡೆಯುತ್ತಿದೆ.
“ಜನತೆ ಸಹ ಶಂಕಾಸ್ಪದ ಚಟುವಟಿಕೆಗಳನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು” ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಘಟನೆಗೆ ನೇರ ಸಂಪರ್ಕ ಇಲ್ಲದಿದ್ದರೂ, ದೆಹಲಿಯ ಬ್ಲಾಸ್ಟ್‌ನ ಸ್ಪಂದನೆ ಕಾರವಾರದವರೆಗೂ ಭದ್ರತಾ ಕಂಪನ ಮೂಡಿಸಿದೆ!


