ಯಲ್ಲಾಪುರ: ಸ್ನೇಹಿತರ ಜೊತೆ ಪಿಕ್ನಿಕ್‌ಗೆ ತೆರಳಿದ ವೇಳೆ ಕಾಲು ಜಾರಿ ಹೊಳೆಯಲ್ಲಿ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ, ಕೈಗಾಡಿ ಹೊಳೆಯಲ್ಲಿ ಪತ್ತೆಯಾದ ಘಟನೆ ಯಲ್ಲಾಪುರದಲ್ಲಿ ನಡೆದಿದೆ.

ಮೃತ ಯುವಕನನ್ನು ಯಲ್ಲಾಪುರದ ನಿವಾಸಿ ಸಾಗರ್ ದೇವಾಡಿಗ (23) ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಕೈಗಾಡಿ ಸೇತುವೆ ಬಳಿ ಬಂದಿದ್ದ ವೇಳೆ ಸಾಗರ್ ಹೊಳೆಯಲ್ಲಿ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದ.

ಸಾಗರ್ ಪತ್ತೆಗೆ ಸ್ಥಳೀಯ ಬುಡಕಟ್ಟು ಸಾಹಸಿಗಳು ಗಣಪತಿ ಸಿದ್ದಿ, ರಾಮಾ ಸಿದ್ದಿ, ವೆಂಕಟರಮಣ ಸಿದ್ದಿ ಹಾಗೂ ನಾರಾಯಣ ಸಿದ್ದಿ ರಾತ್ರಿಯೀಡಿ ನಡೆಸಿದ ಶೋಧ ಕಾರ್ಯಾಚರಣೆಯಿಂದ ಯಶಸ್ಸು ಸಿಕ್ಕಿದೆ. ಇವರು ಕೈಗಾಡಿ ಹೊಳೆಯಲ್ಲಿ ಹುಡುಕಾಟ ನಡೆಸಿ ಮುಳುಗಿದ ಸ್ಥಳದಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಶವ ಪತ್ತೆಹಚ್ಚಿದ್ದಾರೆ.

ಕುಟುಂಬಸ್ಥರು ಶವವನ್ನು ಸಾಗರ್ ದೇವಾಡಿಗದ್ದೇ ಎಂದು ಖಚಿತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Please Share: