ಕಾರವಾರ: ಕಚೇರಿಯ ಕುರ್ಚಿ ಬಿಟ್ಟು ಜಿಲ್ಲೆಯ ಉನ್ನತ ಅಧಿಕಾರಿಗಳೇ ಸ್ವಚ್ಛತೆಗೆ ರಸ್ತೆಗಿಳಿದ ದೃಶ್ಯ ಕಾರವಾರದಲ್ಲಿ ಕಂಡುಬಂತು.
“ಎಕ್ ದಿನ್ ಎಕ್ ಘಂಟಾ ಏಕ್ ಸಾಥ್” ಕಾರ್ಯಕ್ರಮದ ಅಂಗವಾಗಿ ಗುರುವಾರ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಶ ಶಶಿ ತಮ್ಮ ಸಿಬ್ಬಂದಿಯೊಂದಿಗೆ ಕಸ ಸಂಗ್ರಹ ಚೀಲ ಹಿಡಿದು ಶ್ರಮದಾನದಲ್ಲಿ ತೊಡಗಿದರು.
ಜಿಲ್ಲಾ ಪಂಚಾಯತ್ ಆವರಣದಿಂದ ತಹಸೀಲ್ದಾರರ ಕಚೇರಿವರೆಗಿನ ರಸ್ತೆ ಬದಿಯ ಕಸ, ಪ್ಲಾಸ್ಟಿಕ್, ಕಾಗದಗಳನ್ನು ಅಧಿಕಾರಿಗಳು ಸ್ವತಃ ಎತ್ತಿ ಹಾಕುವ ಮೂಲಕ ನಾಗರಿಕರಿಗೆ ಮಾದರಿಯಾದರು.
ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಹಾಗೂ ಜಿಲ್ಲಾ ಪಂಚಾಯತ್-ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಸಹ ಭಾಗವಹಿಸಿದ್ದರು. ಸ್ವಚ್ಛತಾ ಕಾರ್ಯಕ್ಕೂ ಮುನ್ನ ಎಲ್ಲರೂ ಪ್ರತಿಜ್ಞೆ ಸ್ವೀಕರಿಸಿ, “ಸ್ವಚ್ಛ ಕಾರವಾರ” ಸಂದೇಶ ನೀಡಿದರು.


