ಹಳಿಯಾಳ: ಮೈಸೂರು ದಸರಾ ಉತ್ಸವದ ಅಂಗವಾಗಿ ಸೆಪ್ಟೆಂಬರ್ 26ರಿಂದ 28ರವರೆಗೆ ನಡೆದ ದಸರಾ ಕುಸ್ತಿ ಸ್ಪರ್ಧೆಯಲ್ಲಿ ತಾಲೂಕಿನ ದುಸಗಿ ಗ್ರಾಮದ ಪೈಲ್ವಾನ್ ಮಂಜುನಾಥ ನಾಗೇಂದ್ರ ಗೌಡಪ್ಪನವರು ಅತ್ಯುತ್ತಮ ಪ್ರದರ್ಶನ ನೀಡಿ “ದಸರಾ ಕೇಸರಿ 2025” ಪ್ರಶಸ್ತಿಯನ್ನು ಗೆದ್ದಿದ್ದಾರೆ.
74–86 ಕೆ.ಜಿ. ವಿಭಾಗದಲ್ಲಿ ಬಲಿಷ್ಠ ಪೈಲ್ವಾನರನ್ನು ಎದುರಿಸಿ ಮಂಜುನಾಥ ಗೌಡಪ್ಪನವರು ಸತತ ಗೆಲುವುಗಳ ಮೂಲಕ ಪ್ರಶಸ್ತಿಗೆ ಪಾತ್ರರಾದರು. ಮೊದಲ ಸುತ್ತಿನಲ್ಲಿ ಬೆಳಗಾವಿಯ ಗಜಾದೇಶ ಅವರನ್ನು 10–0 ಅಂತರದಲ್ಲಿ ಮಣಿಸಿದ ಅವರು, ದ್ವಿತೀಯ ಸುತ್ತಿನಲ್ಲಿ ದಾವಣಗೆರೆಯ ಯೋಗೇಶ್ ಗೌಡ ವಿರುದ್ಧವೂ 10–0 ಅಂತರದಲ್ಲಿ ಗೆಲುವು ದಾಖಲಿಸಿದರು. ಮೂರನೇ ಸುತ್ತಿನಲ್ಲಿ ಉತ್ತರ ಕನ್ನಡದ ರಾಮಣ್ಣ ಕಲ್ಗಟ್ಕರ್ ಅವರನ್ನು 10–0 ಅಂತರದಲ್ಲಿ ಸೋಲಿಸಿದರು. ನಾಲ್ಕನೇ ಸುತ್ತಿನಲ್ಲಿ ದಾವಣಗೆರೆಯ ದ್ಯಾನೇಶ್ ಗಲಗಲಿ ಅವರನ್ನು ಚಿತ್ ಆಧಾರದಲ್ಲಿ ಮಣಿಸಿದರು.
ಅಂತಿಮವಾಗಿ, 30 ನಿಮಿಷಗಳ ಕಾಲ ನಡೆದ ರೋಮಾಂಚಕ ಫೈನಲ್‌ನಲ್ಲಿ ಧಾರವಾಡದ ಪರಮಾನಂದ ಪೈಲ್ವಾನರನ್ನು 4–2 ಅಂತರದಲ್ಲಿ ಸೋಲಿಸಿ “ದಸರಾ ಕೇಸರಿ 2025” ಕಿರೀಟವನ್ನು ತಮ್ಮದಾಗಿಸಿಕೊಂಡರು.
ವಿಜೇತ ಮಂಜುನಾಥ ಗೌಡಪ್ಪನವರಿಗೆ ಮಾಜಿ ಪೈಲ್ವಾನರು ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಅಭಿನಂದನೆ ಸಲ್ಲಿಸಿ ಭವಿಷ್ಯದ ಹೋರಾಟಗಳಿಗೆ ಶುಭಹಾರೈಕೆಗಳನ್ನು ತಿಳಿಸಿದರು.


