ಕರಾವಳಿ ವಾಯ್ಸ್ ನ್ಯೂಸ್

ಹಳಿಯಾಳ: ಹಳಿಯಾಳ–ಯಲ್ಲಾಪುರ ಮುಖ್ಯ ರಸ್ತೆಯ ಸಾಂಬ್ರಾಣಿ ವಲಯದಲ್ಲಿ ಅಕ್ರಮವಾಗಿ ಅರಣ್ಯ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಕಾರೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಇತ್ತೀಚೆಗೆ ನಡೆದಿದೆ.

ಅರಣ್ಯ ಇಲಾಖೆಗೆ ಲಭಿಸಿದ ಖಚಿತ ಮಾಹಿತಿಯ ಆಧಾರದ ಮೇಲೆ ವಲಯ ಅರಣ್ಯಾಧಿಕಾರಿ ಸಂಗಮೇಶ ಪಾಟೀಲ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಟಾಟಾ ಇಂಡಿಕಾ ವಿಸ್ಟಾ ಕಾರಿನಲ್ಲಿ ಅಕ್ರಮವಾಗಿ ಸಾಗವಾನಿ (ಟೀಕ್) ಮರದ ತುಂಡುಗಳನ್ನು ಸಾಗಿಸಲಾಗುತ್ತಿದ್ದುದನ್ನು ಪತ್ತೆಹಚ್ಚಲಾಗಿದೆ. ಕಾರನ್ನು ಪರಿಶೀಲಿಸಿದ ವೇಳೆ ಯಾವುದೇ ಪರವಾನಗಿ ಅಥವಾ ಮಾನ್ಯ ದಾಖಲೆಗಳಿಲ್ಲದೆ ಅರಣ್ಯ ಉತ್ಪನ್ನ ಸಾಗಾಟ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಕಾರ್ಯಾಚರಣೆಯ ವೇಳೆ ವಾಹನದಲ್ಲಿದ್ದ ಆರೋಪಿತರು ಕತ್ತಲಿನ ಸದುಪಯೋಗ ಪಡೆದು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಪತ್ತೆಗೆ ಅರಣ್ಯ ಇಲಾಖೆ ವ್ಯಾಪಕ ಶೋಧನಾ ಕಾರ್ಯಾಚರಣೆ ಕೈಗೊಂಡಿದ್ದು, ಸಮೀಪದ ಗ್ರಾಮಗಳು ಹಾಗೂ ಅರಣ್ಯ ಪ್ರದೇಶಗಳಲ್ಲಿ ತಪಾಸಣೆ ಮುಂದುವರೆದಿದೆ.

ವಶಪಡಿಸಿಕೊಂಡಿರುವ ಕಾರು ಹಾಗೂ ಸಾಗವಾನಿ ಮರದ ತುಂಡುಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಅಕ್ರಮ ಅರಣ್ಯ ಉತ್ಪನ್ನ ಸಾಗಾಟ ಜಾಲದ ಹಿನ್ನೆಲೆ, ಈ ಹಿಂದೆ ನಡೆದ ಪ್ರಕರಣಗಳ ಸಂಪರ್ಕ ಹಾಗೂ ಆರೋಪಿತರ ಬಗ್ಗೆ ತನಿಖೆ ತೀವ್ರಗೊಳಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಅರಣ್ಯ ಸಂಪತ್ತಿನ ರಕ್ಷಣೆ ಹಾಗೂ ಅಕ್ರಮ ಕಡಿತ–ಸಾಗಾಟ ತಡೆಯುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಸಹ ಇಂತಹ ಕಾರ್ಯಾಚರಣೆಗಳನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಸಂಗಮೇಶ ಪಾಟೀಲ ತಿಳಿಸಿದ್ದಾರೆ.

 

Please Share: