ಕರಾವಳಿ ವಾಯ್ಸ್ ನ್ಯೂಸ್
ಮುಂಡಗೋಡ: ಕೊಲೆ, ಸುಲಿಗೆ, ಬೆದರಿಕೆ ಸೇರಿದಂತೆ ಅನೇಕ ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಂಡು ಸ್ಥಳೀಯರಿಗೆ ತಲೆನೋವಾಗಿ ಮಾರ್ಪಟ್ಟಿದ್ದ ಮುಂಡಗೋಡದ ಕಿರಣ್ ಸಾಳುಂಕೆ ಕೊನೆಗೂ ಕಾನೂನಿನ ಕಠಿಣ ಬಲೆಗೆ ಸಿಕ್ಕಿಬಿದ್ದಿದ್ದಾನೆ!
ಸಾಮಾಜಿಕ ಶಾಂತಿ ಮತ್ತು ಸಾರ್ವಜನಿಕ ಸ್ವಾಸ್ಥ್ಯ ಕದಡಬಾರದು ಎಂಬ ಉದ್ದೇಶದಿಂದ ಶಿರಸಿ ಸಹಾಯಕ ಆಯುಕ್ತ ಕಾವ್ಯಾರಾಣಿ ಅವರು ಧೈರ್ಯಶಾಲಿ ಕ್ರಮ ಕೈಗೊಂಡು ಕಿರಣ್ ಸಾಳುಂಕೆಯನ್ನು ಮೂರು ತಿಂಗಳವರೆಗೆ ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡುವ ಆದೇಶ ಹೊರಡಿಸಿದ್ದಾರೆ.
ಮುಂಡಗೋಡ ಪಿಐ ರಂಗನಾಥ್ ನೀಲಮ್ಮನವರ್ ಅವರ ಶಿಫಾರಸಿನ ಮೇರೆಗೆ ಎಸಿ ಕೋರ್ಟ್‌ನಲ್ಲಿ ವಿಚಾರಣೆ ನಡೆಸಿ ತಕ್ಷಣದಿಂದಲೇ ಜಾರಿಯಾಗುವಂತೆ ಆದೇಶ ಹೊರಬಂದಿದೆ.
ಪಟ್ಟಣದ ಇಂದಿರಾನಗರದ ನಿವಾಸಿಯಾದ ಕಿರಣ್ ಸಾಳುಂಕೆಯು ಕಳೆದ ಕೆಲಕಾಲದಿಂದ ಅನೇಕ ಅಪರಾಧಿಕ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾನೆ ಎನ್ನಲಾಗುತ್ತಿದ್ದು, ಅವನ ನಡೆ-ನಡವಳಿಕೆ ಸಾರ್ವಜನಿಕ ಅಶಾಂತಿಗೆ ಕಾರಣವಾಗಿತ್ತು.
ಆದೇಶ ಹೊರಬಂದ ಕೂಡಲೇ ಮುಂಡಗೋಡ ಪೊಲೀಸರು ಕಿರಣ್ ಸಾಳುಂಕೆಯನ್ನು ಕಟ್ಟುನಿಟ್ಟಿನ ಪೊಲೀಸ್ ಭದ್ರತೆಯಲ್ಲಿ ಯಾದಗಿರಿ ಜಿಲ್ಲೆಗೆ ರವಾನಿಸಿದರು.
ಸಮಾಜದ ಶಾಂತಿಗೆ ಧಕ್ಕೆ ತಂದವರ ವಿರುದ್ಧ ಕಾನೂನು ಕೈಗೊಂಡ ಕಠಿಣ ಕ್ರಮವನ್ನು ಸ್ಥಳೀಯರು ಸ್ವಾಗತಿಸಿದ್ದಾರೆ.

							
