ಕರಾವಳಿ ವಾಯ್ಸ್ ನ್ಯೂಸ್
ಹೊನ್ನಾವರ: ತಾಲೂಕಿನ ಕಾಸರಕೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಟ್ಟೆ ವಿನಾಯಕ ಕೇರಿಯಲ್ಲಿ ವಿದ್ಯುತ್ ಲೈನ್ ಹರಿದು ಬಿದ್ದು ಗಂಡ ಹೆಂಡತಿ ಇಬ್ಬರು ಮೃತಪಟ್ಟ ಘಟನೆ ರವಿವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ನಡೆದಿದೆ.
ಮೃತರಾದವರು ಕಾಸರಕೋಡದ ಬಟ್ಟೆ ವಿನಾಯಕ ಕೇರಿಯ ಸಂತೋಷ ಗೌಡ ಮತ್ತು ಅವರ ಪತ್ನಿ ಸೀತಾ ಗೌಡ. ಘಟನೆ ಸ್ಥಳದಲ್ಲೇ ಇಬ್ಬರೂ ದುರ್ಮರಣ ಹೊಂದಿದ್ದಾರೆಂದು ತಿಳಿದುಬಂದಿದೆ.
ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಘಟನೆಯನ್ನು ನೋಡಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.
“ಈ ಪ್ರದೇಶದ ವಿದ್ಯುತ್ ತಂತಿಗಳು ಹಾಳಾಗಿ ಅಪಾಯಕಾರಿಯಾಗಿ ತೂಗುತ್ತಿವೆ ಎಂದು ಹಲವು ಬಾರಿ ಹೆಸ್ಕಾಂಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ,” ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಘಟನೆಯ ನಂತರ ಗ್ರಾಮಸ್ಥರು ಹೆಸ್ಕಾಂ ಅಧಿಕಾರಿಗಳು ಮತ್ತು ಸಚಿವರು ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದು, ಸ್ಥಳದಲ್ಲಿ ಪ್ರತಿಭಟನೆ ಚಟುವಟಿಕೆಗಳು ಜೋರಾಗಿವೆ.


