ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಸಿಲಿಂಡರ್ ಸೋರಿಕೆಯಿಂದ ಮನೆಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟವಾದ ಘಟನೆ ಬುಧವಾರ ನಡೆದಿದೆ.
ಗಂಗವ್ವಾ ಶೇಖಪ್ಪ ಧಾರವಾಡ ಅವರ ಮನೆಗೆ ಈ ಅವಘಡ ಸಂಭವಿಸಿದೆ. ಮನೆಯಲ್ಲಿದ್ದ ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದ ಏಕಾಏಕಿ ಬೆಂಕಿ ಆವರಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಮನೆಮೂಲೆಯೆಲ್ಲ ಹರಡಿದೆ.
ಈ ಅವಘಡದಲ್ಲಿ ಮನೆಯಲ್ಲಿದ್ದ ಸುಮಾರು 20 ಗ್ರಾಂ ಬಂಗಾರ, ಎರಡು ಲಕ್ಷ ರೂ. ನಗದು ಸೇರಿದಂತೆ ಬಟ್ಟೆ, ಪಾತ್ರೆಗಳು ಮತ್ತು ಇತರೆ ಮನೆ ಉಪಕರಣಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಒಟ್ಟಾರೆ ಸುಮಾರು ಹತ್ತು ಲಕ್ಷ ರೂಪಾಯಿ ಮೌಲ್ಯದ ಹಾನಿ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಚಂದ್ರಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಮಲ್ಲಿಗವಾಡ, ಅಡಿವೆಪ್ಪ ಕುರುವಿನಕೊಪ್ಪ, ಅರುಣ್ ಮುಲಗೆ ಹಾಗೂ ಶ್ರೀರಾಹುಲ ಜಿಡ್ಡಿಮನಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಸ್ಥಳೀಯರು ಘಟನೆಯಿಂದ ಬೆಚ್ಚಿಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
