ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಬೇಲೆಕೇರಿ ಬಂದರಿನ ಮೂಲಕ ನಡೆದಿದ್ದ ಅಕ್ರಮ ಕಬ್ಬಿಣದ ಅದಿರು ಸಾಗಾಟ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಾರವಾರ–ಅಂಕೋಲಾ ಶಾಸಕ ಸತೀಶ್ ಸೈಲ್ ಅವರಿಗೆ ಕರ್ನಾಟಕ ಹೈಕೋರ್ಟ್ ಮತ್ತೆ ತಾತ್ಕಾಲಿಕ ರಿಲೀಪ್ ನೀಡಿದೆ.
ಹೈಕೋರ್ಟ್ ಸೈಲ್ ಅವರಿಗೆ ನೀಡಲಾಗಿದ್ದ ಮಧ್ಯಂತರ ವೈದ್ಯಕೀಯ ಜಾಮೀನು ಅವಧಿಯನ್ನು ನವೆಂಬರ್ 20ರವರೆಗೆ ವಿಸ್ತರಿಸಿದೆ. ಜೊತೆಗೆ, ಶಾಸಕರ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಲು ಅರ್ಹ ವೈದ್ಯರ ಹೆಸರನ್ನು ಸೂಚಿಸುವಂತೆ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ನ್ಯಾಯಾಲಯವು ಸೂಚನೆ ನೀಡಿದೆ.
ಶಾಸಕ ಸೈಲ್ ಅವರು ತಮ್ಮ ವೈದ್ಯಕೀಯ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಬೇಕೆಂದು ಆದೇಶದಲ್ಲಿದೆ.
ಹಿಂದಿನ ದಿನಗಳಲ್ಲಿ ವಿಶೇಷ ನ್ಯಾಯಾಲಯವು ಸತೀಶ್ ಸೈಲ್ ಅವರ ವೈದ್ಯಕೀಯ ಜಾಮೀನನ್ನು ರದ್ದುಗೊಳಿಸಿ, ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಕಾರಣವಾಗಿ “ಶಾಸಕರು ತನಿಖೆಗೆ ಸಹಕರಿಸುತ್ತಿಲ್ಲ” ಹಾಗೂ “ವೈದ್ಯಕೀಯ ಚಿಕಿತ್ಸೆಗಾಗಿ ನೀಡಿದ ನಿಯಮ ಪಾಲನೆ ಇಲ್ಲ” ಎಂಬುದನ್ನು ಉಲ್ಲೇಖಿಸಲಾಗಿತ್ತು.
ಈ ನಿರ್ಧಾರವನ್ನು ಪ್ರಶ್ನಿಸಿ ಸೈಲ್ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆಗ ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಲಾಗಿದ್ದು, ಅಂದಿನವರೆಗೂ ಮಧ್ಯಂತರ ಜಾಮೀನು ಮುಂದುವರಿಸಲು ನ್ಯಾಯಾಲಯ ಅನುಮತಿಸಿತ್ತು. ಇದೀಗ ಮತ್ತೊಂದು ವಾರ ಅವಧಿಗೆ ಜಾಮೀನು ವಿಸ್ತರಿಸುವ ಮೂಲಕ ನ್ಯಾಯಾಲಯ ತಾತ್ಕಾಲಿಕ ರಿಲೀಫ್ ನೀಡಿದೆ.


