ಕರಾವಳಿ ವಾಯ್ಸ್ ನ್ಯೂಸ್
ರಾಮನಗರ: ರಾಮನಗರ–ಧಾರವಾಡ ಮಾರ್ಗದ ನಾಗರಗಾಳಿ ಸಮೀಪ ಬೊಲೆರೋ ಪಿಕಪ್ ವಾಹನ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಗೋವಾದಲ್ಲಿ ಕೋಳಿಗಳನ್ನು ಇಳಿಸಿ ಹುಬ್ಬಳ್ಳಿಗೆ ತೆರಳುತ್ತಿದ್ದ ವೇಳೆ ನಾಗರಗಾಳಿ ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬೊಲೆರೋ ಪಿಕಪ್ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದಲ್ಲಿ ವಾಹನದೊಳಗೆ ಸಿಲುಕಿಕೊಂಡಿದ್ದ ಬಸ್ತವಾಡದ ಸಾಜನ್ ಚಿಲೇದಾರ್ (45) ಮೃತಪಟ್ಟಿದ್ದಾರೆ.
ವಾಹನದಲ್ಲಿದ್ದ ಗಜಬರ್ ಕುತುಬುದ್ದೀನ್ ಖಾನಾಪುರಿ ಹಾಗೂ ರಫೀಕ್ ಸಲೀಂ ಮುಲ್ಲಾ, ಇಬ್ಬರೂ ಬಸ್ತವಾಡ ಗ್ರಾಮದವರು, ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು 108 ಆಂಬ್ಯುಲೆನ್ಸ್ ಮೂಲಕ ರಾಮನಗರ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಗೆ ರವಾನಿಸಲಾಗಿದೆ.
ಮೃತದೇಹವನ್ನು ಖಾನಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಖಾನಾಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಲ್.ಎಚ್. ಗವಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಲೋಂಡಾ ಪೊಲೀಸ್ ಠಾಣೆಯ ಸಿಬ್ಬಂದಿ ರಿಯಾಜ್ ಕಿಲ್ಲೇದಾರ್ ಪಂಚನಾಮೆ ನಡೆಸಿದರು.


