ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ತಾಲೂಕಿನ ಅರಗಾದ ಕೋಸ್ಟ್ ಗಾರ್ಡ್ ಕಚೇರಿಯ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದೆ.
ಬೈಕ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಬೈಕ್ ಸವಾರ ಮತ್ತು ಹಿಂಬದಿ ಕುಳಿತಿದ್ದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೂಲಗಳ ಪ್ರಕಾರ, ಬೈಕ್ ಸವಾರ ಆನಂದ ಎಸ್.ಆರ್ ಬೈಕ್ ತಿರುಗಿಸುತ್ತಿದ್ದ ವೇಳೆ ಅಂಕೋಲಾ ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಹಾಗೂ ಹಿಂಬದಿ ಕುಳಿತಿದ್ದ ಬಾಲಕಿಯ ತಲೆ, ಮುಖ, ಕೈ ಮತ್ತು ಕಾಲುಗಳಿಗೆ ಗಂಭೀರ ಪೆಟ್ಟಾಗಿದ್ದು, ಸ್ಥಳೀಯರು ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.
ಅಪಘಾತದ ಬಳಿಕ ಸ್ಥಳದಲ್ಲಿ ಕ್ಷಣಾರ್ಧದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾತ್ರಿ ವೇಳೆ ಹೆದ್ದಾರಿಯಲ್ಲಿ ವೇಗ ನಿಯಂತ್ರಣ ಇಲ್ಲದ ವಾಹನಗಳು ಅಪಘಾತಕ್ಕೆ ಕಾರಣವಾಗುತ್ತಿವೆ ಎಂಬ ಜನರ ಆಕ್ರೋಶವೂ ವ್ಯಕ್ತವಾಗಿದೆ.

