ಕರಾವಳಿ ವಾಯ್ಸ್ ನ್ಯೂಸ್
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಯಲ್ಲಾಪುರ ರಸ್ತೆಯ ಚವತ್ತಿ–ಉಮ್ಮಚ್ಚಗಿ ನಡುವಿನ ಗೊರ್ಸಗದ್ದೆ ಬಳಿ ಶನಿವಾರ ಬೆಳಗ್ಗೆ ಖಾಸಗಿ ಪ್ರವಾಸಿ ಬಸ್ ಒಂದು ನಿಯಂತ್ರಣ ತಪ್ಪಿ ಧರೆಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ.
ಈ ಅಪಘಾತದಲ್ಲಿ ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಹಲವಾರು ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರಲ್ಲಿ ಹೆಚ್ಚಿನವರು ಮೈಸೂರಿನವರಾಗಿದ್ದಾರೆ ಎನ್ನಲಾಗಿದೆ.
ಮೈಸೂರಿನಿಂದ ದಾಂಡೇಲಿ ಪ್ರವಾಸಕ್ಕೆ ಹೊರಟಿದ್ದ ಖಾಸಗಿ ಬಸ್ನಲ್ಲಿ ಸುಮಾರು 30 ಮಂದಿ ಪ್ರವಾಸಿಗರು ಪ್ರಯಾಣಿಸುತ್ತಿದ್ದರು. ಶುಕ್ರವಾರ ಮೈಸೂರಿನಿಂದ ಹೊರಟಿದ್ದ ಬಸ್ ಇಂದು ಬೆಳಗಿನ ಜಾವ ಯಲ್ಲಾಪುರ ಮಾರ್ಗವಾಗಿ ದಾಂಡೇಲಿಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಧರೆಗೆ ಬಸ್ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಬಸ್ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಬಸ್ಸಿನೊಳಗೆ ಸಿಲುಕಿಕೊಂಡಿದ್ದನು. ಸ್ಥಳೀಯ ಗ್ರಾಮಸ್ಥರು ಹಾಗೂ ಸಹಪ್ರಯಾಣಿಕರು ತಕ್ಷಣ ಧಾವಿಸಿ ಚಾಲಕನನ್ನು ಹಾಗೂ ಗಾಯಗೊಂಡ ಪ್ರಯಾಣಿಕರನ್ನು ಹೊರತೆಗೆದು ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಗಾಯಾಳುಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಾಲಕನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಯಲ್ಲಾಪುರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ, ಚಾಲಕನ ಅಜಾಗರೂಕತೆ ಅಥವಾ ವೇಗವೇ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಖಾಸಗಿ ಬಸ್ಗಳ ಅಪಘಾತಗಳು ಹೆಚ್ಚಾಗುತ್ತಿದ್ದು, ಸಾವು–ನೋವುಗಳ ಸಂಖ್ಯೆಯೂ ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತೆ, ಚಾಲಕರ ಜವಾಬ್ದಾರಿ ಹಾಗೂ ವಾಹನಗಳ ತಾಂತ್ರಿಕ ಸ್ಥಿತಿಗೆ ಹೆಚ್ಚಿನ ಗಮನ ನೀಡಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
