ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಬೆಂಗಳೂರು–ಕಾರವಾರ ಮಾರ್ಗದಲ್ಲಿ ಸಂಚರಿಸುವ ಅಂಕೋಲಾ ತಾಲೂಕಿನ ಅವರ್ಸಾ ಮೂಲದ ತುಳಸಿದಾಸ ಕಾಮತ್ ಅವರಿಗೆ ಸೇರಿದ ವರದ್ ಲೈನ್ಸ್ (VARAD LINES) ಖಾಸಗಿ ಬಸ್‌ಗಳಲ್ಲಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಟಿಕೆಟ್ ದರ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Banner Ad

ಸಾಮಾನ್ಯ ದಿನಗಳಲ್ಲಿ ಬೆಂಗಳೂರು–ಕಾರವಾರ ಪ್ರಯಾಣಕ್ಕೆ ₹1,200ರಿಂದ ₹2,200ರ ವರೆಗೆ ಟಿಕೆಟ್ ದರವಿದ್ದರೆ, ಹಬ್ಬದ ಅವಧಿಯಲ್ಲಿ ಇದೇ ಮಾರ್ಗದ ದರ ₹3,000ರಿಂದ ₹5,500ರವರೆಗೆ ಏರಿಕೆಯಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಆರೋಪಿಸಲಾಗಿದೆ. ಸಾಮಾನ್ಯ ದರಕ್ಕೆ ಹೋಲಿಸಿದರೆ ಹಬ್ಬದ ಸಂದರ್ಭದಲ್ಲಿ ದರ ಬಹುತೇಕ ದುಪ್ಪಟ್ಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

‘ಹಬ್ಬಗಳು ಸಂಭ್ರಮಾಚರಣೆಗೆ, ಜನರನ್ನು ಶೋಷಿಸಲು ಅಲ್ಲ’ ಎಂಬ ಸಂದೇಶದೊಂದಿಗೆ ದೀಪಾವಳಿ, ಗಣೇಶ ಚತುರ್ಥಿ, ದಸರಾ, ಈದ್ ಹಾಗೂ ಕ್ರಿಸ್‌ಮಸ್‌ ಸೇರಿದಂತೆ ಹಬ್ಬಗಳ ಸಂದರ್ಭದಲ್ಲಿ ಖಾಸಗಿ ಬಸ್‌ಗಳ ದರ ಏರಿಕೆಯಾಗುತ್ತಿರುವುದನ್ನು ಪ್ರಶ್ನಿಸಲಾಗಿದೆ.

ಬೆಂಗಳೂರು–ಕಾರವಾರ ಮಾರ್ಗವನ್ನು ವಿದ್ಯಾರ್ಥಿಗಳು, ಉದ್ಯೋಗಿಗಳು, ಕುಟುಂಬಗಳು ಸೇರಿದಂತೆ ಸಾವಿರಾರು ಮಂದಿ ಅನಿವಾರ್ಯವಾಗಿ ಅವಲಂಬಿಸಿದ್ದಾರೆ. ಹಬ್ಬದ ಸಂದರ್ಭದಲ್ಲಿ ಊರಿಗೆ ತೆರಳಬೇಕಾದ ಅನಿವಾರ್ಯತೆಯನ್ನು ಬಳಸಿಕೊಂಡು ಅತಿಯಾದ ದರ ವಸೂಲಿ ಮಾಡುವುದು ಸರಿಯೇ ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಎತ್ತಿದ್ದಾರೆ.

ಶಾಸಕ ಸತೀಶ್ ಸೈಲ್, ಮಾಜಿ ಶಾಸಕಿ ರೂಪಾಲಿ ನಾಯ್ಕ್ ಹಾಗೂ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರನ್ನು ಉಲ್ಲೇಖಿಸಿ, ವರದ್ ಲೈನ್ಸ್‌ ಮಾಲೀಕರ ವ್ಯವಹಾರ ನಿಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಹಬ್ಬದ ಸಂದರ್ಭದಲ್ಲಿ ನಡೆಯುತ್ತಿದೆ ಎನ್ನಲಾದ ಈ ‘ದರದ ಲೂಟ್’ ತಡೆಯಲು ನೀವು ಯಾವ ಕ್ರಮ ಕೈಗೊಳ್ಳುತ್ತೀರಿ? ಎಂದು ಪ್ರಶ್ನಿಸಲಾಗಿದೆ.

‘ನಾವು ಪಾವತಿಸುತ್ತೇವೆ, ನೀವು ಲಾಭ ಪಡೆಯುತ್ತೀರಾ? ಮಾನವೀಯತೆ ಎಲ್ಲಿದೆ?’ ಎಂದು ಪ್ರಶ್ನಿಸಿರುವ ಪೋಸ್ಟ್‌ನಲ್ಲಿ ಪ್ರಯಾಣಿಕರಿಗೆ ನ್ಯಾಯಯುತ ಹಾಗೂ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.

“Affordable travel is our right, not a privilege” — ಕೈಗೆಟುಕುವ ದರದ ಪ್ರಯಾಣ ನಮ್ಮ ಹಕ್ಕು, ವಿಶೇಷ ಸವಲತ್ತು ಅಲ್ಲ.

“Take action. Protect people” — ಕ್ರಮ ಕೈಗೊಂಡು ಜನರನ್ನು ರಕ್ಷಿಸಿ.

“Let travel be fair for everyone” — ಎಲ್ಲರಿಗೂ ನ್ಯಾಯಯುತ ಪ್ರಯಾಣದ ಅವಕಾಶ ಇರಲಿ ಎಂಬ ಸಂದೇಶಗಳ ಮೂಲಕ ಸಾರ್ವಜನಿಕರ ಪರ ಧ್ವನಿ ಎತ್ತಲಾಗಿದೆ.

ಆದಾಗ್ಯೂ, ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಹೆಚ್ಚಿನ ದರ ವಸೂಲಿ ಆರೋಪಕ್ಕೆ ವರದ್ ಲೈನ್ಸ್‌ ಸಂಸ್ಥೆಯ ಪ್ರತಿಕ್ರಿಯೆ ಏನು ಎಂಬುದು ಸ್ಪಷ್ಟವಾಗಿಲ್ಲ. ಆರೋಪದ ಸತ್ಯಾಸತ್ಯತೆ ಹಾಗೂ ದರ ನಿಗದಿ ಕುರಿತು ಸಂಬಂಧಪಟ್ಟ ಸಾರಿಗೆ ಇಲಾಖೆ ಪರಿಶೀಲನೆ ನಡೆಸಬೇಕೆಂಬ ಆಗ್ರಹವೂ ಕೇಳಿಬಂದಿದೆ.

ಹಬ್ಬದ ಸಂದರ್ಭಗಳಲ್ಲಿ ಪ್ರಯಾಣಿಕರ ಅನಿವಾರ್ಯತೆಯನ್ನು ದುರುಪಯೋಗಪಡಿಸಿಕೊಂಡು ಅತಿಯಾದ ದರ ವಿಧಿಸಲಾಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿ, ತಪ್ಪು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

 

Please Share: