ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ಕರಾವಳಿಯಲ್ಲಿ ಕಷ್ಟದ ಮೇಲೆ ಕಷ್ಟ ಅನುಭವಿಸುತ್ತಿರುವ ಮೀನುಗಾರರಿಗೆ ಮತ್ತೊಂದು ಸಂಕಷ್ಟ ಒಕ್ಕರಿಸಿದೆ. ಜಿಲ್ಲೆಯ ಮೀನುಗಾರಿಕಾ ಬಂದರಿನಲ್ಲಿ ಹೂಳಿನ ಸಮಸ್ಯೆ ತೀವ್ರಗೊಂಡಿದ್ದು, ಇದರ ಪರಿಣಾಮವಾಗಿ ಬೋಟ್ ಮುಳುಗಡೆ ಘಟನೆಗಳು ಮರುಕರುಳುತ್ತಿವೆ.

ಶುಕ್ರವಾರ ಮುಂಜಾನೆ ತಾಲ್ಲೂಕಿನ ಅಮದಳ್ಳಿ ಬಂದರಿನಲ್ಲಿ ಹೂಳಿನಲ್ಲಿ ಸಿಲುಕಿಕೊಂಡು ಶ್ರೀಕಾಂತ ತಾಂಡೇಲ್ ಅವರ ಮಾಲೀಕತ್ವದ ಮೀನುಗಾರಿಕಾ ಬೋಟ್ ಮುಳುಗಡೆಯಾದ ಘಟನೆ ನಡೆದಿದೆ. ಈ ಘಟನೆಯಲ್ಲಿ ಲಕ್ಷಾಂತರ ರೂಪಾಯಿಗಳಷ್ಟು ಆರ್ಥಿಕ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಬಂದರಿನ ಒಳಗೆ ಹೂಳು ತುಂಬಿಕೊಂಡಿರುವುದರಿಂದ ಬೋಟುಗಳು ಲಂಗರು ಹಾಕುವಾಗಲೇ ತೊಂದರೆ ಎದುರಾಗುತ್ತಿದ್ದು, ಮೀನುಗಾರರು ಆತಂಕದ ನಡುವೆಯೇ ತಮ್ಮ ದಿನನಿತ್ಯದ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಳೆಗಾಲದಲ್ಲಿ ಮೇಲ್ಭಾಗದಿಂದ ಹರಿದುಬರುವ ಮಣ್ಣಿನ ನೀರು ನೇರವಾಗಿ ಬಂದರಿಗೆ ಸೇರುವುದರಿಂದ ವರ್ಷಕ್ಕೊಮ್ಮೆ ಹೂಳು ತುಂಬಿಕೊಳ್ಳುವುದು ಸಾಮಾನ್ಯವಾಗಿದೆ.

ಅದಲ್ಲದೆ ಬಂದರಿನ ಆಳ ಕಡಿಮೆಯಾಗಿರುವುದರಿಂದ ಸಮುದ್ರದ ಇಳಿತದ ಸಮಯದಲ್ಲಿ ಬೋಟುಗಳು ಪಲ್ಟಿಯಾಗುವುದು ಅಥವಾ ಸಿಲುಕಿಕೊಳ್ಳುವುದು ಅನಿವಾರ್ಯವಾಗಿದೆ. ಉಬ್ಬರದ ವೇಳೆಯಲ್ಲಿ ಬಂದರಿನೊಳಗೆ ಬಂದ ಬೋಟುಗಳು ಇಳಿತದ ವೇಳೆಗೆ ಹೊರಗೆ ಹೋಗಲು ಆಗದೇ ಸಿಲುಕಿಕೊಳ್ಳುವ ಘಟನೆಗಳು ಆಗಾಗ ನಡೆಯುತ್ತಿವೆ.

ಸ್ಥಳೀಯರು ಹಾಗೂ ಮೀನುಗಾರರ ಅಭಿಪ್ರಾಯದಂತೆ, ಬಂದರಿನ ಹೂಳು ತೆರವು ಕಾರ್ಯಾಚರಣೆ ತ್ವರಿತವಾಗಿ ನಡೆದರೆ ಇಂತಹ ದುರ್ಘಟನೆಗಳನ್ನು ತಡೆಯಬಹುದು.

ಬಂದರು ಇಲಾಖೆಯ ಮೂಲಗಳ ಪ್ರಕಾರ, ಹೂಳು ತೆರವಿಗೆ ಈಗಾಗಲೇ ಅನುದಾನ ಮಂಜೂರಾಗಿದೆ. ಆದರೆ ಸಿ.ಆರ್.ಜೆಡ್ (CRZ) ಅನುಮತಿ ದೊರೆತ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ.

ಇತ್ತೀಚೆಗೆ ಬೇಲೆಕೆರಿ ಬಂದರಿನಲ್ಲಿಯೂ ಇದೇ ರೀತಿಯ ಹೂಳು ಸಮಸ್ಯೆಯಿಂದಾಗಿ ಎರಡು ಬೋಟ್‌ಗಳು ಮುಳುಗಿ ಲಕ್ಷಾಂತರ ಹಾನಿ ಸಂಭವಿಸಿತ್ತು. ಇದರ ಹಿನ್ನೆಲೆಯಲ್ಲಿ ಅಮದಳ್ಳಿ ಬಂದರಿನ ಘಟನೆಯು ಮೀನುಗಾರರ ಚಿಂತೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

 

 

Please Share: