ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ದೀಪಾವಳಿಯ ಸಂಭ್ರಮದ ಮಧ್ಯೆ ಕಾರವಾರದಲ್ಲಿ ದುಃಖದ ಸನ್ನಿವೇಶ ನಿರ್ಮಾಣವಾಗಿದೆ. ರವಿವಾರ ಮಧ್ಯಾಹ್ನ ಕಾರವಾರದ ಬಾಂಡಿಶಿಟ್ಟ ಬಳಿ ಸರ್ಕಾರಿ ಸಾರಿಗೆ ಬಸ್ ಮತ್ತು ಸ್ಕೂಟಿಯ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ವೃದ್ಧೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರಾದವರು ಮೇತ್ರಿವಾಡದ ಸುಶೀಲಾ ಕಮಾಲಕರ ನಾಯ್ಕ (65) ಎಂದು ಗುರುತಿಸಲಾಗಿದೆ. ಅವರು ತಮ್ಮ ಸಂಬಂಧಿ ಯೊಂದಿಗೆ ಶಿರವಾಡದಿಂದ ಕಾರವಾರದತ್ತ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಎದುರಿನಿಂದ ಕಾರವಾರ ಘಟಕದ ಸರ್ಕಾರಿ ಸಾರಿಗೆ ಬಸ್ ಕೇರೋಡಿ ಕಡೆಗೆ ತೆರಳುತ್ತಿತ್ತು. ಬಾಂಡಿಶಿಟ್ಟದ ಬಳಿ ಸ್ಕೂಟಿ ಮತ್ತು ಬಸ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಸುಶೀಲಾ ನಾಯ್ಕ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಹೊತ್ತಿಗೆ ಸ್ಥಳದಲ್ಲಿ ವಾಹನ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಜನರು ಈ ದುರ್ಘಟನೆ ನೋಡಿ ಬೆಚ್ಚಿಬಿದ್ದರು. ಸ್ಕೂಟಿ ಚಲಾಯಿಸುತ್ತಿದ್ದ ವ್ಯಕ್ತಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನೆಯ ನಂತರ ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದು, ಹಬ್ಬದ ದಿನವೇ ವೃದ್ಧೆಯ ಸಾವಿನಿಂದ ಮೇತ್ರಿವಾಡ ಹಾಗೂ ಬಾಂಡಿಶಿಟ್ಟ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.


