ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಅನಮೋಡ ಅಬಕಾರಿ ತನಿಖಾ ಠಾಣೆಯಲ್ಲಿ ವಾಹನ ತಪಾಸಣೆ ವೇಳೆ ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 267 ಲೀಟರ್ ಗೋವಾ ಮದ್ಯವನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ದೇವಸತಿರಂ, ಸತ್ಯನಗರ ನಿವಾಸಿ ಅರಳುಮಣಿ ತಂದೆ ಶೇಖರ್ ಎಂದು ಗುರುತಿಸಲಾಗಿದೆ.
ನ.6ರ ಮಧ್ಯರಾತ್ರಿ 12.45ರ ಸುಮಾರಿಗೆ ಅನಮೋಡ ತನಿಖಾ ಠಾಣೆಯಲ್ಲಿ ಅಬಕಾರಿ ನಿರೀಕ್ಷಕರು ಹಾಗೂ ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿದ್ದಾಗ TN-70-AY-6431 ನೋಂದಣಿ ಸಂಖ್ಯೆಯ ಐಚರ್ ಪ್ರೋ ಲಾರಿಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಲಾರಿಯ ಹಿಂಭಾಗದ ಬಾಡಿಯಲ್ಲಿ ನಾಲ್ಕು ಕೃತಕ ಕಂಪಾರ್ಟ್ಮೆಂಟ್ಗಳನ್ನು ನಿರ್ಮಿಸಿ, ಅವುಗಳಲ್ಲಿ ಗೋವಾ ರಾಜ್ಯದ ವಿವಿಧ ನಮೂನೆಯ 267 ಲೀಟರ್ ಮದ್ಯದ ಬಾಟಲಿಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಪತ್ತೆಯಾಗಿದೆ. ಗೋವಾದಿಂದ ಮಾರಾಟ ಉದ್ದೇಶಕ್ಕಾಗಿ ತನ್ನ ಮನೆಗೆ ಮದ್ಯ ಸಾಗಿಸುತ್ತಿದ್ದ ಎನ್ನಲಾಗಿದೆ.
ಲಾರಿ ಹಾಗೂ ಮದ್ಯವನ್ನು ಜಪ್ತಿ ಮಾಡಿಕೊಂಡ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ, ಮುಂದಿನ ಕ್ರಮಕ್ಕಾಗಿ ದಾಂಡೇಲಿ ವಲಯದ ಅಬಕಾರಿ ಉಪನಿರೀಕ್ಷಕರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದಂತೆ, ಉತ್ತರ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನ ಹಾಗೂ ಯಲ್ಲಾಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ಸೂಚನೆಯಡಿ ಕಾರ್ಯಾಚರಣೆ ನಡೆದಿದೆ.


