ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ದಕ್ಷಿಣ ಕನ್ನಡದ ಮೊಗವಿರ ಮತ್ತು ಉತ್ತರ ಕನ್ನಡದ ಮೀನುಗಾರ ಮೊಗೇರ ಸಮುದಾಯಗಳ ಸಾಮಾಜಿಕ ಹಿನ್ನೆಲೆ ವಿಭಿನ್ನವಾಗಿದ್ದು, ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವ ಪ್ರಯತ್ನಕ್ಕೆ ಸರ್ಕಾರ ಬೆಂಬಲ ನೀಡಿದರೆ ಜಿಲ್ಲಾದ್ಯಂತ ಬೃಹತ್ ಹೋರಾಟ ನಡೆಸಲಾಗುವುದು ಎಂದು ಭೀಮಗರ್ಜನೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅರ್ಜುನ್ ಮಿಂಟಿ ಎಚ್ಚರಿಸಿದ್ದಾರೆ.

Banner Ad

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ಮೀನುಗಾರಿಕೆಯನ್ನು ವೃತ್ತಿಯಾಗಿಸಿಕೊಂಡು ಬಂದಿರುವ ಮೊಗೇರ ಸಮುದಾಯ ಹಿಂದುಳಿದ ವರ್ಗಕ್ಕೆ ಸೇರಿದೆ. ಆದರೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಮೊಗವಿರ ಸಮುದಾಯ ಶತಮಾನಗಳಿಂದ ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ ಹಾಗೂ ತೀವ್ರ ತಾರತಮ್ಯವನ್ನು ಅನುಭವಿಸಿಕೊಂಡು ಬಂದಿದೆ. ಹೀಗಾಗಿ ಎರಡೂ ಸಮುದಾಯಗಳನ್ನು ಒಂದೇ ಎಂದು ಪರಿಗಣಿಸುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಪರಿಶಿಷ್ಟ ಜಾತಿಗಳ ಪಟ್ಟಿಯು ಅಸ್ಪೃಶ್ಯತೆ ಮತ್ತು ಸಾಮಾಜಿಕ ತಾರತಮ್ಯವನ್ನು ಅನುಭವಿಸಿದ ಸಮುದಾಯಗಳಿಗೆ ಸಂಬಂಧಿಸಿದ್ದಾಗಿದೆ. ಉತ್ತರ ಕನ್ನಡದ ಮೀನುಗಾರ ಮೊಗೇರ ಸಮುದಾಯಕ್ಕೆ ಅಂತಹ ಸಾಮಾಜಿಕ ಹಿನ್ನೆಲೆ ಇಲ್ಲ. ಕೇವಲ ಹೆಸರಿನ ಸಾಮ್ಯತೆಯ ಆಧಾರದಲ್ಲಿ ಒಂದು ಪ್ರದೇಶದ ಹಿಂದುಳಿದ ವರ್ಗದ ಸಮುದಾಯವನ್ನು ಮತ್ತೊಂದು ಪ್ರದೇಶದ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ ಎಂಬುದು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನಿರ್ದೇಶನಗಳ ಸಾರವಾಗಿದೆ. ಹೀಗಿದ್ದರೂ ಸುಳ್ಳು ದಾಖಲೆ ಸೃಷ್ಟಿಸಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆಯಲು ಪ್ರಯತ್ನಿಸುವುದು ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ ಎಂದು ಆರೋಪಿಸಿದ್ದಾರೆ.

DSS ಹೆಸರಿಗೆ ಕಪ್ಪುಚುಕ್ಕೆ ತರಬೇಡಿ: ದಲಿತ ಸಂಘರ್ಷ ಸಮಿತಿ ದಲಿತರ ಹಕ್ಕುಗಳ ರಕ್ಷಣೆ ಹಾಗೂ ಅಸ್ಪೃಶ್ಯತೆಯ ವಿರುದ್ಧ ಐತಿಹಾಸಿಕ ಹೋರಾಟ ನಡೆಸಿಕೊಂಡು ಬಂದಿರುವ ಸಂಘಟನೆಯಾಗಿದೆ. ಆದರೆ ವೈಯಕ್ತಿಕ ಹಠ ಹಾಗೂ ರಾಜಕೀಯ ಲಾಭಕ್ಕಾಗಿ DSS ಸಂಘಟನೆಯ ಹೆಸರು ಮತ್ತು ನಾಯಕತ್ವವನ್ನು ಬಳಸಿಕೊಂಡು ಮೂಲ ದಲಿತರಿಗೆ ಅನ್ಯಾಯ ಮಾಡಲು ಹೊರಟಿರುವುದು ಸಂಘಟನೆಯ ಮೂಲ ಆಶಯಗಳಿಗೆ ವಿರುದ್ಧವಾಗಿದೆ. ಇಂತಹ ನಡೆಗೆ ಅವಕಾಶ ನೀಡುವುದಿಲ್ಲ ಎಂದು ಅರ್ಜುನ್ ಮಿಂಟಿ ಎಚ್ಚರಿಸಿದ್ದಾರೆ.

ಯಾವುದೇ ಸಚಿವರು, ಶಾಸಕರು ಅಥವಾ ಜನಪ್ರತಿನಿಧಿಗಳು ಮತಬ್ಯಾಂಕ್ ರಾಜಕಾರಣಕ್ಕಾಗಿ ಅಥವಾ ಒತ್ತಡಕ್ಕೆ ಮಣಿದು ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವ ಪ್ರಕ್ರಿಯೆಗೆ ಬೆಂಬಲ ಸೂಚಿಸಿದರೆ ಮೂಲ ದಲಿತ ಸಮುದಾಯಗಳ ತೀವ್ರ ವಿರೋಧ ಎದುರಿಸಬೇಕಾಗುತ್ತದೆ. ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಮೂಲ ದಲಿತರ ತಾಳ್ಮೆಯನ್ನು ಪರೀಕ್ಷಿಸಲು ಮುಂದಾಗಬಾರದು ಎಂದು ಎಚ್ಚರಿಸಿದ್ದಾರೆ.

ಈ ವಿಚಾರದಲ್ಲಿ ಸರ್ಕಾರ ಯಾವುದೇ ಅನ್ಯಾಯದ ನಿರ್ಧಾರ ಕೈಗೊಂಡರೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಎಲ್ಲ ಮೂಲ ದಲಿತ ಸಮುದಾಯಗಳನ್ನು ಒಗ್ಗೂಡಿಸಿ ಬೀದಿಗಿಳಿದು ಬೃಹತ್ ಪ್ರತಿಭಟನೆ ಹಾಗೂ ಉಗ್ರ ಹೋರಾಟ ನಡೆಸಲಾಗುವುದು. ಜಿಲ್ಲೆಯಲ್ಲಿ ಹಿಂದೆಂದೂ ಕಾಣದಂತಹ ಪ್ರತಿಭಟನೆ ನಡೆಯಲಿದ್ದು, ಇದರಿಂದ ಉಂಟಾಗುವ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಿಗೆ ಸರ್ಕಾರ ಹಾಗೂ ಸುಳ್ಳು ಹಕ್ಕು ಪ್ರತಿಪಾದಿಸುವವರೇ ಹೊಣೆಗಾರರಾಗಲಿದ್ದಾರೆ ಎಂದು ಹೇಳಿದ್ದಾರೆ.

ನಾವು ಯಾರ ಹಕ್ಕನ್ನೂ ಕಸಿದುಕೊಳ್ಳಲು ಬಯಸುವುದಿಲ್ಲ. ಆದರೆ ಸಂವಿಧಾನ ಮೂಲ ದಲಿತರಿಗೆ ನೀಡಿರುವ ಮೀಸಲಾತಿ ಮತ್ತು ಹಕ್ಕುಗಳನ್ನು ಬೇರೆಯವರು ಕಸಿದುಕೊಳ್ಳಲು ಪ್ರಯತ್ನಿಸಿದರೆ ಸುಮ್ಮನಿರಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲಿಯೇ ಹೋರಾಟ ನಡೆಸಿ ಇಂತಹ ಪ್ರಯತ್ನವನ್ನು ಸಂಪೂರ್ಣವಾಗಿ ವಿರೋಧಿಸಲಾಗುವುದು ಎಂದು ಭೀಮಗರ್ಜನೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅರ್ಜುನ್ ಮಿಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

 

 

 

 

 

Please Share: