ಕರಾವಳಿ ವಾಯ್ಸ್ ನ್ಯೂಸ್
ಕುಮಟಾ: ಕಾಡಿನಲ್ಲಿರಬೇಕಾದ ಚಿರತೆ ನಾಡಿನತ್ತ ನುಗ್ಗಿ ಕಡವೆಯೊಂದನ್ನು ಬಲಿ ಪಡೆದ ಘಟನೆ ತಾಲೂಕಿನ ಅಂತ್ರವಳ್ಳಿ ಗ್ರಾಮದ ಬರಗದ್ದೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಕಾಡಿನಿಂದ ಕಡವೆಯನ್ನು ಬೆನ್ನಟ್ಟಿಕೊಂಡು ತೋಟಕ್ಕೆ ಬಂದ ಚಿರತೆ, ಅದರ ಮೇಲೆ ದಾಳಿ ನಡೆಸಿ ಕೊಂದು, ದೇಹದ ಭಾಗಶಃ ಮಾಂಸವನ್ನು ತಿಂದು ಕಾಡಿಗೆ ಮರಳಿದೆ.
ಕಾಡಿನಿಂದ ಕಡವೆಯನ್ನು ಬೆನ್ನಟ್ಟಿಕೊಂಡು ಬಂದ ಚಿರತೆ ತೋಟದಲ್ಲಿ ಅದರ ಮೇಲೆ ದಾಳಿ ನಡೆಸಿದೆ. ದಾಳಿಗೆ ಸಿಲುಕಿದ ಕಡವೆ ಸ್ಥಳದಲ್ಲೇ ಮೃತಪಟ್ಟಿದೆ. ಈ ವೇಳೆ ಅಕ್ಕಪಕ್ಕದ ಮನೆಗಳ ನಾಯಿಗಳು ಜೋರಾಗಿ ಬೊಗಳಲಾರಂಭಿಸಿವೆ. ನಾಯಿಗಳ ಕೂಗಿನಿಂದ ಎಚ್ಚೆತ್ತುಕೊಂಡ ಚಿರತೆ, ಕಡವೆಯ ದೇಹದ ಭಾಗಶಃ ಮಾಂಸವನ್ನು ತಿಂದು ಅಲ್ಲಿಂದ ಕಾಡಿನತ್ತ ತೆರಳಿದೆ ಎಂದು ತಿಳಿದುಬಂದಿದೆ.
ಮಂಗಳವಾರ ರಾತ್ರಿ ನಡೆದ ಈ ಘಟನೆ ಬುಧವಾರ ಬೆಳಕಿಗೆ ಬಂದಿದ್ದು, ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅರಣ್ಯ ಪ್ರದೇಶದ ಸಮೀಪದ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಸಂಚಾರದಿಂದ ಜನರಲ್ಲಿ ಆತಂಕ ಹೆಚ್ಚುತ್ತಿದೆ. ತೋಟಗಳತ್ತ ಕಾಡುಪ್ರಾಣಿಗಳು ಬರುತ್ತಿರುವ ಘಟನೆಗಳು ಗ್ರಾಮೀಣ ಭಾಗದ ಜನರಲ್ಲಿ ಭಯ ಮೂಡಿಸಿದ್ದು, ರಾತ್ರಿ ವೇಳೆ ಹೊರಗೆ ಓಡಾಡುವ ಸಂದರ್ಭ ಎಚ್ಚರಿಕೆ ವಹಿಸುವ ಅನಿವಾರ್ಯತೆ ಎದುರಾಗಿದೆ.
ಅಂತ್ರವಳ್ಳಿ ಗ್ರಾಮದ ಬರಗದ್ದೆಯಲ್ಲಿ ಚಿರತೆ ಕಾಣಿಸಿಕೊಂಡು ಕಡವೆಯನ್ನು ಬಲಿ ಪಡೆದಿರುವ ಘಟನೆ ಸ್ಥಳೀಯರಲ್ಲಿ ಕಾಡುಪ್ರಾಣಿಗಳ ಸಂಚಾರದ ಕುರಿತು ಮತ್ತೊಮ್ಮೆ ಆತಂಕ ಮೂಡಿಸಿದೆ.


