ಕರಾವಳಿ ವಾಯ್ಸ್ ನ್ಯೂಸ್
ಹಳಿಯಾಳ: ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಮಗುಚಿಬಿದ್ದ ವಾಹನ, ಗಾಯಗೊಂಡ ಚಾಲಕ… ತುರ್ತು ಕರೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿದ ಹಳಿಯಾಳದ ERSS 112 ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಿ, ವಾಹನ ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಅ. 12ರಂದು ಸಂಜೆ 5.30ರ ಸುಮಾರಿಗೆ ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ಲಕಟ್ಟಾ ಗ್ರಾಮದ ಮುಖ್ಯ ರಸ್ತೆಯ ತಿರುವಿನಲ್ಲಿ ಖಾಲಿ ಗ್ಯಾಸ್ ಸಿಲಿಂಡರ್ಗಳನ್ನು ಸಾಗಿಸುತ್ತಿದ್ದ KA-28-8176 ಸಂಖ್ಯೆಯ ವಾಹನ ಸ್ವಯಂ ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಮಗುಚಿಬಿದ್ದಿತ್ತು.
ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತುರ್ತು ಕರೆ ಸ್ವೀಕರಿಸಿದ 112 ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತೆರಳಿ ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಿದರು. ಬಳಿಕ ಅಪಘಾತಕ್ಕೀಡಾದ ವಾಹನವನ್ನು ರಸ್ತೆಯ ಪಕ್ಕಕ್ಕೆ ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.
ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಸ್ಪಂದಿಸಿ ಗಾಯಾಳುವಿನ ನೆರವಿಗೆ ಧಾವಿಸಿ, ಸಂಚಾರ ವ್ಯವಸ್ಥೆ ಸುಗಮಗೊಳಿಸಿದ ಎಎಸ್ಐ ಪ್ರಕಾಶ ಮೂಳೆ ಹಾಗೂ ಚಾಲಕ ಎಆರ್ಎಸ್ಐ ಶ್ರೀಕಾಂತ ಲಮಾಣಿ ಅವರ ಕರ್ತವ್ಯನಿಷ್ಠೆಯನ್ನು ಪೊಲೀಸ್ ಇಲಾಖೆ ಅಭಿನಂದಿಸಿದೆ.


