ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಕಿನ್ನರ ಬಳಿ ರಾಜ್ಯ ಹೆದ್ದಾರಿಯಲ್ಲಿ ಕೆಎಸ್ಆರ್ಟಿಸಿ ಬಸ್ ಹಾಗೂ ಮೊಟ್ಟೆ ಸಾಗಿಸುತ್ತಿದ್ದ ಟಾಟಾ ಏಸ್ ವಾಹನ ನಡುವೆ ಡಿಕ್ಕಿ ಸಂಭವಿಸಿ, ಹಲವರು ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ಅಪಘಾತದ ರಭಸಕ್ಕೆ ಟಾಟಾ ಏಸ್ನಲ್ಲಿದ್ದ ಮೊಟ್ಟೆಗಳು ರಸ್ತೆಯಲ್ಲೇ ಒಡೆದು ಚೆಲ್ಲಾಪಿಲ್ಲಿಯಾಗಿವೆ.
ಕೇರೋಡಿಯಿಂದ ಕಾರವಾರ ಕಡೆಗೆ ಸಾಗುತ್ತಿದ್ದ ಕಾರವಾರ ಘಟಕದ ಕೆಎಸ್ಆರ್ಟಿಸಿ ಬಸ್ ಹಾಗೂ ಕಿನ್ನರ ಕಡೆಗೆ ತೆರಳುತ್ತಿದ್ದ ಮೊಟ್ಟೆ ಸಾಗಿಸುತ್ತಿದ್ದ ಟಾಟಾ ಏಸ್ ವಾಹನ ಕಿನ್ನರ ಬಳಿಯ ತಿರುವಿನಲ್ಲಿ ಡಿಕ್ಕಿಯಾಗಿವೆ. ಡಿಕ್ಕಿಯ ರಭಸಕ್ಕೆ ಗೂಡ್ಸ್ ರಿಕ್ಷಾದ ಒಂದು ಬದಿಗೆ ಹಾನಿಯಾಗಿದೆ.

ಬಸ್ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಟಾಟಾ ಏಸ್ನ ಚಾಲಕ ಸೇರಿದಂತೆ ಮತ್ತೋರ್ವ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಾರವಾರ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಯಾವುದೇ ಗಂಭೀರ ಪ್ರಾಣಾಪಾಯ ಸಂಭವಿಸಿಲ್ಲ.
ಅಪಘಾತಕ್ಕೀಡಾದ ವಾಹನಗಳು ರಸ್ತೆಯಲ್ಲೇ ನಿಂತಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಸ್ಥಳಕ್ಕೆ ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಒಡೆದ ಮೊಟ್ಟೆಗಳ ರಾಶಿ ಅಪಘಾತದ ತೀವ್ರತೆಯನ್ನು ಬಿಂಬಿಸಿದರೆ, ಕಾರವಾರ ಭಾಗದಲ್ಲಿ ಕೆಎಸ್ಆರ್ಟಿಸಿ ಬಸ್ಗಳು ಪದೇಪದೇ ಅಪಘಾತಕ್ಕೀಡಾಗುತ್ತಿರುವುದು ಮತ್ತೊಮ್ಮೆ ಸಾರ್ವಜನಿಕರ ಗಮನ ಸೆಳೆದಿದೆ.


