ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಗಣಪತಿ ಮಂಟಪ ತರಲು ತೆರಳಿದ್ದ ವೇಳೆ ಕಾಳಿ ನದಿಯ ಮಧ್ಯಭಾಗದಲ್ಲಿ ದೋಣಿ ಮುಗುಚಿ ನಾಪತ್ತೆಯಾಗಿದ್ದ ವೃದ್ಧನ ಶವ ಸತತ ಏಳು ಗಂಟೆಗಳ ಶೋಧ ಕಾರ್ಯದ ಬಳಿಕ ಸೋಮವಾರ ಸಂಜೆ ಹಳಗಾದ ದೋಳ್ ಬಳಿ ಪತ್ತೆಯಾಗಿದೆ.
ಮೃತರನ್ನು ಸಿದ್ದರ ಗ್ರಾಮದ ಬಾಳಸು ವಿಶ್ರಾಮ ಆಚಾರಿ (62) ಎಂದು ಗುರುತಿಸಲಾಗಿದೆ.
ಗಣೇಶೋತ್ಸವದ ಹಿನ್ನೆಲೆಯಲ್ಲಿ ಗಣಪತಿ ಮಂಟಪ ತರಲು ಬಾಳಸು ಆಚಾರಿ ಅವರು ಸಿದ್ದರ ಗ್ರಾಮದಿಂದ ಉಳಗ ಗ್ರಾಮಕ್ಕೆ ಬಂದಿದ್ದರು. ಬಳಿಕ ದೋಣಿಯಲ್ಲಿ ಕಾಳಿ ನದಿ ದಾಟುತ್ತಿದ್ದ ವೇಳೆ ನದಿಯ ಮಧ್ಯಭಾಗದಲ್ಲಿ ದೋಣಿ ಮುಗುಚಿದ ಪರಿಣಾಮ ಅವರು ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಘಟನೆ ಭಾನುವಾರ ಮಧ್ಯಾಹ್ನ ನಡೆದಿದ್ದು, ಸಂಜೆ ವೇಳೆಗೆ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಗಿತ್ತು. ಕತ್ತಲಿನ ಕಾರಣ ತಕ್ಷಣ ಶೋಧ ಕಾರ್ಯ ನಡೆಸಲು ಸಾಧ್ಯವಾಗಿರಲಿಲ್ಲ.

ಡಿಎಫ್ಒ ಹಾಗೂ ತಹಸೀಲ್ದಾರ್ ಸೂಚನೆ ಮೇರೆಗೆ ಸೋಮವಾರ ಬೆಳಗ್ಗೆ 9.30ರಿಂದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ಆರಂಭಿಸಿದರು. ಕಾಳಿ ನದಿಯ ಎರಡೂ ದಡಗಳಲ್ಲಿ ಸುಮಾರು ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಶೋಧ ನಡೆಸಲಾಯಿತು. ದೋಣಿ ಮುಳುಗಿದ ಸ್ಥಳದಲ್ಲಿ ಸುಮಾರು 100 ಅಡಿ ಆಳದವರೆಗೆ ಎರಡು ಗ್ರಾಫೈಲ್ (ಪಾತಾಳ ಗರಡಿ) ಬಳಸಿ ಶೋಧ ನಡೆಸಲಾಯಿತು. ಸ್ಥಳೀಯ ದೋಣಿ ಚಾಲಕರೂ ಕಾರ್ಯಾಚರಣೆಗೆ ನೆರವಾದರು.

ಮಧ್ಯಾಹ್ನದ ವೇಳೆಗೆ ನದಿಯಲ್ಲಿ ಸೋಫಾ ಚೇರ್ ಪತ್ತೆಯಾಗಿತ್ತು. ನೀರಿನ ಸೆಳೆತಕ್ಕೆ ಮೃತದೇಹ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗಿತ್ತು. ಸತತ ಶೋಧದ ಬಳಿಕ ಸೋಮವಾರ ಸಂಜೆ ಹಳಗಾದ ದೋಳ್ ಬಳಿ ಮೃತದೇಹ ಪತ್ತೆಯಾಯಿತು ಎಂದು ಎಎಫ್ಒ ಶ್ರೀನಿವಾಸ್ ಪೂಜಾರಿ ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಎಎಸ್ಒ ಮಹಾಬಲೇಶ್ವರ ಗೌಡ, ಎಎಫ್ಒ ಶ್ರೀನಿವಾಸ್ ಪೂಜಾರಿ, ಎಲ್ಎಫ್ಎಂ ಸ್ವಪ್ನೀಲ್ ಪೆಡ್ನೇಕರ್, ಎಫ್ಎಫ್ ಗುರುರಾಜ್ ತಾಂಡೆಲ್, ಬೋಟ್ ಚಾಲಕ ಆದಿಯಪ್ಪ ಕೊಡುಗಿನಪ್ಪ ಸೇರಿದಂತೆ ಅಗ್ನಿಶಾಮಕ ಸಿಬ್ಬಂದಿ ಪಾಲ್ಗೊಂಡಿದ್ದರು. ಕದ್ರಾ ಪೊಲೀಸರು ಶೋಧ ಕಾರ್ಯಕ್ಕೆ ನೆರವು ನೀಡಿದರು.

ಘಟನೆ ಕದ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


