ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ನಗರದ ಬಸ್ ನಿಲ್ದಾಣದ ಸಮೀಪ ಬುಧವಾರ ಬೆಳಗ್ಗೆ ಸಾರಿಗೆ ಬಸ್ ಹಾಗೂ ಟಾಟಾ ಅಲ್ಟ್ರೋಜ್ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ ಕಾರಿನ ಸವಾರರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಪ್ರಾಥಮಿಕ ಮಾಹಿತಿಯಂತೆ, KA-31-F-1253 ನೋಂದಣಿ ಸಂಖ್ಯೆಯ ಕಾರವಾರ–ಕಡವಾಡ–ಕಾರವಾರ ಮಾರ್ಗದ ಸಾರಿಗೆ ಬಸ್ ಬಸ್ ನಿಲ್ದಾಣದತ್ತ ತೆರಳುತ್ತಿತ್ತು. ಇದೇ ಮಾರ್ಗದಲ್ಲಿ GA-04-E-7916 ನೋಂದಣಿ ಸಂಖ್ಯೆಯ ಟಾಟಾ ಅಲ್ಟ್ರೋಜ್ ಕಾರು ಸಂಚರಿಸುತ್ತಿತ್ತು. ಕಾರಿನ ಚಾಲಕ ಯು-ಟರ್ನ್ ಮಾಡಲು ಬ್ರೇಕ್ ಹಾಕಿದ ಸಂದರ್ಭದಲ್ಲಿ, ಹಿಂಬದಿಯಿಂದ ಬರುತ್ತಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಕಾರಿನ ಹಿಂಬದಿಯ ಗಾಜು ಸಂಪೂರ್ಣ ಪುಡಿಪುಡಿಯಾಗಿದ್ದು, ವಾಹನದ ಹಿಂಭಾಗಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ ಕಾರಿನ ಸವಾರರು ಅಪಾಯದಿಂದ ಪಾರಾಗಿದ್ದಾರೆ.

ಅಪಘಾತದ ಮಾಹಿತಿ ತಿಳಿದು ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ವಾಹನಗಳನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

 

 

Please Share: