ಕರಾವಳಿ ವಾಯ್ಸ್ ನ್ಯೂಸ್ 

ಜೋಯಿಡಾ: ತಾಲೂಕಿನ ಉಳವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳಗೇರಿ ಗ್ರಾಮದಲ್ಲಿ ವಾರ ಕಳೆದರೂ ವಿದ್ಯುತ್ ಪೂರೈಕೆ ಪುನಃಸ್ಥಾಪಿಸದಿರುವುದಕ್ಕೆ ಸ್ಥಳೀಯ ಪ್ರಮುಖ ಸಂಜಯ ಮಹೇಕರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Banner Ad

“ಒಂದು ವಾರದಿಂದ ಗ್ರಾಮ ಕತ್ತಲಲ್ಲಿದೆ. ಕರೆ ಮಾಡಿದರೆ ಕರೆ ಸ್ವೀಕರಿಸುವವರಿಲ್ಲ, ಸಮಸ್ಯೆ ಕೇಳಿದರೆ ಉತ್ತರಿಸುವವರಿಲ್ಲ. ಜನರು ಕತ್ತಲಲ್ಲಿ ಬದುಕಬೇಕಾದ ಪರಿಸ್ಥಿತಿ ಬಂದರೂ ಹೆಸ್ಕಾಂ ಅಧಿಕಾರಿಗಳಿಗೆ ಮಾತ್ರ ಇದರ ಬಗ್ಗೆ ಕಾಳಜಿಯೇ ಇಲ್ಲ” ಎಂದು ಅವರು ಕಿಡಿಕಾರಿದ್ದಾರೆ.

“ವಿದ್ಯುತ್ ಇಲ್ಲದೆ ವಿದ್ಯಾರ್ಥಿಗಳ ಓದಿಗೆ ತೊಂದರೆಯಾಗಿದೆ. ವೃದ್ಧರು, ಮಹಿಳೆಯರು ಸೇರಿದಂತೆ ಇಡೀ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ವಿದ್ಯುತ್ ಲೈನ್‌ಗೆ ಅಡ್ಡಿಯಾಗಿರುವುದನ್ನು ತೆರವುಗೊಳಿಸಲು ಗ್ರಾಮಸ್ಥರೇ ತಮ್ಮ ಸ್ವಂತ ಶ್ರಮದಲ್ಲಿ ನೆರವು ನೀಡುತ್ತಿದ್ದಾರೆ. ಆದರೂ ಹೆಸ್ಕಾಂ ಮಾತ್ರ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ” ಎಂದು ಆರೋಪಿಸಿದ್ದಾರೆ.

ಪ್ರಸ್ತುತ ಕರ್ತವ್ಯದಲ್ಲಿರುವ ಲೈನ್‌ಮನ್‌ಗೆ ವಯಸ್ಸಿನ ಹಿನ್ನೆಲೆಯಲ್ಲಿ ಕಂಬ ಹತ್ತಿ ದುರಸ್ತಿ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳಿದ್ದು, ಸಮಸ್ಯೆ ನಿಭಾಯಿಸಲು ಸಾಧ್ಯವಾಗದಿದ್ದರೆ ತಕ್ಷಣ ಸಮರ್ಥ ಲೈನ್‌ಮನ್‌ನ್ನು ನಿಯೋಜಿಸಬೇಕು ಎಂದು ಮಹೇಕರ ಒತ್ತಾಯಿಸಿದ್ದಾರೆ.

“ಜನರ ತೆರಿಗೆ ಹಣದಿಂದ ನಡೆಯುವ ಇಲಾಖೆ ಜನರ ಕರೆಗೂ ಸ್ಪಂದಿಸದಿದ್ದರೆ ಯಾರ ಬಳಿ ಹೋಗಬೇಕು? ಒಂದು ವಾರ ವಿದ್ಯುತ್ ಇಲ್ಲದಿರುವುದು ಸಣ್ಣ ಸಮಸ್ಯೆಯಲ್ಲ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಂಡು ಕಾಲಹರಣ ಮಾಡದೆ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕು. ಸುಳಗೇರಿ ಗ್ರಾಮಕ್ಕೆ ಕೂಡಲೇ ವಿದ್ಯುತ್ ನೀಡದಿದ್ದರೆ ಗ್ರಾಮಸ್ಥರ ಪರವಾಗಿ ಹೆಸ್ಕಾಂ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ” ಎಂದು ಸಂಜಯ ಮಹೇಕರ ಎಚ್ಚರಿಕೆ ನೀಡಿದ್ದಾರೆ.

 

Please Share: