ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಹಬ್ಬದ ಸಂಭ್ರಮಕ್ಕೆ ಮಳೆ ನೀರು ಅಡ್ಡಿಯಾಗದಂತೆ ನಗರದ ನ್ಯೂ ಕೆಎಚ್ಬಿ ಬಡಾವಣೆಯಲ್ಲಿ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ಮುಂದಾಗಿದ್ದಾರೆ. ಗಾರ್ಡನ್ ಬಳಿಯ ಗಣೇಶ ಮಂಟಪದ ಎದುರು 3,600 ಚದರ ಅಡಿ ಪ್ರದೇಶದಲ್ಲಿ ಸ್ವಂತ ವೆಚ್ಚದಲ್ಲಿ ಇಂಟರ್ಲಾಕ್ ಅಳವಡಿಸುವ ಕಾಮಗಾರಿಗೆ ಸೋಮವಾರ ಚಾಲನೆ ನೀಡುವ ಮೂಲಕ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ.

ನ್ಯೂ ಕೆಎಚ್ಬಿ ಬಡಾವಣೆಯಲ್ಲಿ ಹಲವು ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ ಹಾಗೂ ನವರಾತ್ರಿ ಉತ್ಸವಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಆದರೆ ಪ್ರತಿವರ್ಷ ಮಳೆಗಾಲದಲ್ಲಿ ಗಣೇಶ ಮಂಟಪದ ಎದುರು ಮಳೆ ನೀರು ನಿಂತು ಕೆಸರು ಉಂಟಾಗುತ್ತಿದ್ದ ಪರಿಣಾಮ ಸಾರ್ವಜನಿಕರು ಹಾಗೂ ಉತ್ಸವಕ್ಕೆ ಆಗಮಿಸುವವರಿಗೆ ಓಡಾಟಕ್ಕೆ ತೊಂದರೆಯಾಗುತ್ತಿತ್ತು.
ಕಳೆದ ಗಣೇಶ ಚೌತಿ ಹಾಗೂ ನವರಾತ್ರಿ ಸಂದರ್ಭದಲ್ಲಿ ಬಡಾವಣೆಗೆ ಭೇಟಿ ನೀಡಿದ್ದ ರೂಪಾಲಿ ನಾಯ್ಕ ಅವರು ಮಂಟಪದ ಎದುರಿನ ಅವ್ಯವಸ್ಥೆಯನ್ನು ಗಮನಿಸಿದ್ದರು. ಸ್ಥಳೀಯರ ಸಮಸ್ಯೆ ಆಲಿಸಿ, ಇಂಟರ್ಲಾಕ್ ಅಳವಡಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಅದರಂತೆ ಸ್ಥಳಕ್ಕೆ ಆಗಮಿಸಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಇಂಟರ್ಲಾಕ್ ಅಳವಡಿಕೆಯಿಂದ ಮಳೆ ನೀರು ನಿಂತು ಕೆಸರು ಉಂಟಾಗುವ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವ ನಿರೀಕ್ಷೆಯಿದ್ದು, ಈ ಬಾರಿಯ ಗಣೇಶೋತ್ಸವ ಸಂದರ್ಭದಲ್ಲಿ ಭಕ್ತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ಭರವಸೆ ನೀಡಿ ಮರೆತುಹೋಗದೆ, ಮಾತನ್ನು ಕಾರ್ಯರೂಪಕ್ಕೆ ತಂದ ರೂಪಾಲಿ ನಾಯ್ಕ ಅವರ ನಡೆಗೆ ಗಣೇಶೋತ್ಸವ ಸಮಿತಿ ಸದಸ್ಯರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
