ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಕೈಗಾದಲ್ಲಿರುವ ಭಾರತೀಯ ಅಣು ವಿದ್ಯುತ್ ನಿಗಮ ನಿಯಮಿತ (ಎನ್‌ಪಿಸಿಐಎಲ್)ನಲ್ಲಿ ನಡೆಯುತ್ತಿರುವ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಳೀಯ ಅರ್ಹ ಯುವಕರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅರ್ಹತೆ, ಅನುಭವ ಹಾಗೂ ಅಗತ್ಯ ಕೌಶಲ್ಯ ಹೊಂದಿದ್ದರೂ ಸ್ಥಳೀಯರನ್ನು ಕಡೆಗಣಿಸಲಾಗುತ್ತಿದೆ ಎಂದು ಯುವ ಮುಖಂಡ ಅಮೃತ್ ಬಾಂದೇಕರ ಆರೋಪಿಸಿದ್ದಾರೆ.

ಯುವ ಮುಖಂಡ ಅಮೃತ್ ಬಾಂದೇಕರ

ಎನ್‌ಪಿಸಿಐಎಲ್ ಕೈಗಾ ಘಟಕದಲ್ಲಿ ಇತ್ತೀಚೆಗೆ 350ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಸೇರಿದಂತೆ ಜಿಲ್ಲೆಯ ಸಾವಿರಾರು ಯುವಕರು ಪರೀಕ್ಷೆ ಬರೆದಿದ್ದಾರೆ. ಇದೀಗ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಪ್ರಕ್ರಿಯೆಯೂ ಆರಂಭವಾಗಿದ್ದು, ಆದರೆ ಈವರೆಗೆ ಸ್ಥಳೀಯ ಅಭ್ಯರ್ಥಿಗಳ ಪೈಕಿ ಒಬ್ಬರಿಗೂ ಸಂದರ್ಶನಕ್ಕೆ ಅವಕಾಶ ದೊರೆತಿಲ್ಲ ಎಂಬ ಮಾಹಿತಿ ಇದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೈಗಾ ಯೋಜನೆಗೆ ಜಿಲ್ಲೆಯ ಜನ ನೆಲ, ಜಲ ತ್ಯಾಗ ಮಾಡಿದ್ದಾರೆ. ಆದರೆ ಯೋಜನೆಯಿಂದ ಉಂಟಾಗುವ ಪರಿಣಾಮಗಳನ್ನು ಸ್ಥಳೀಯರು ಎದುರಿಸುತ್ತಿದ್ದರೂ ಉದ್ಯೋಗದ ವಿಚಾರದಲ್ಲಿ ಮಾತ್ರ ಹೊರ ರಾಜ್ಯದವರಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂಬುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಕೈಗಾದಲ್ಲಿ ಈಗಾಗಲೇ ನಾಲ್ಕು ಅಣು ವಿದ್ಯುತ್ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಐದು ಮತ್ತು ಆರನೇ ಘಟಕಗಳ ಕಾಮಗಾರಿ ಪ್ರಗತಿಯಲ್ಲಿದೆ.

ಕೈಗಾದಲ್ಲಿ ಉದ್ಯೋಗ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಹಲವು ಯುವಕರು ತಾಂತ್ರಿಕ ಶಿಕ್ಷಣ ಸೇರಿದಂತೆ ವಿವಿಧ ಅರ್ಹತೆಗಳನ್ನು ಪಡೆದಿದ್ದಾರೆ. ಆದರೆ ಪದೇಪದೇ ಸ್ಥಳೀಯರಿಗೆ ಉದ್ಯೋಗದಲ್ಲಿ ಅನ್ಯಾಯವಾಗುತ್ತಿದೆ. ಸ್ಥಳೀಯರಿಗೆ ಉದ್ಯೋಗದಲ್ಲಿ ಶೇ.70ರಷ್ಟು ಆದ್ಯತೆ ನೀಡಲಾಗುತ್ತದೆ ಎಂಬುದು ಅಧಿಕಾರಿಗಳ ಹೇಳಿಕೆಗೆ ಮಾತ್ರ ಸೀಮಿತವಾಗಿದ್ದು, ವಾಸ್ತವದಲ್ಲಿ ಅದರ ಪ್ರಯೋಜನ ಸ್ಥಳೀಯರಿಗೆ ಸಿಗುತ್ತಿಲ್ಲ ಎಂದು ಬಾಂದೇಕರ ದೂರಿದ್ದಾರೆ.

ಸ್ಥಳೀಯರಿಗೆ ಉದ್ಯೋಗದಲ್ಲಿ ನ್ಯಾಯ ಒದಗಿಸುವಂತೆ ಈಗಾಗಲೇ ಮನವಿ ಹಾಗೂ ಹೋರಾಟಗಳನ್ನು ನಡೆಸಲಾಗಿದ್ದರೂ, ಅವು ಅಧಿಕಾರಿಗಳ ಭರವಸೆಗೆ ಮಾತ್ರ ಸೀಮಿತವಾಗಿವೆ. ಇತರೆ ರಾಜ್ಯಗಳಲ್ಲಿ ಯೋಜನೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಅನ್ಯಾಯವಾಗದಂತೆ ಅಲ್ಲಿನ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಧ್ವನಿ ಎತ್ತುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಥಳೀಯ ಯುವಕರ ಪರವಾಗಿ ಅಂತಹ ಬಲವಾದ ಧ್ವನಿ ಕೇಳಿಬರುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಲಾದರೂ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಸ್ಥಳೀಯ ಯುವಕರ ಉದ್ಯೋಗದ ಹಕ್ಕಿನ ಪರವಾಗಿ ಧ್ವನಿ ಎತ್ತಬೇಕು. ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಳೀಯ ಅರ್ಹ ಅಭ್ಯರ್ಥಿಗಳಿಗೆ ಸೂಕ್ತ ಅವಕಾಶ ಕಲ್ಪಿಸುವ ಮೂಲಕ ನ್ಯಾಯ ಒದಗಿಸಬೇಕು ಎಂದು ಅಮೃತ್ ಬಾಂದೇಕರ ಆಗ್ರಹಿಸಿದ್ದಾರೆ.

 

 

 

Please Share: