ಕರಾವಳಿ ವಾಯ್ಸ್ ನ್ಯೂಸ್ 

ಮುಂಡಗೋಡ: ಜಮೀರ್ ಅಹ್ಮದ್ ದರ್ಗಾವಾಲೆ ಕೊಲೆ ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಪೊಲೀಸರು, ಕೃತ್ಯಕ್ಕೆ ಶಸ್ತ್ರಾಸ್ತ್ರ ಪೂರೈಸಿದ ಆರೋಪದ ಮೇಲೆ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

Banner Ad

ಉತ್ತರ ಪ್ರದೇಶದ ರೋವಾಬ್ ಅಲಿ ಬಂಧಿತ ಆರೋಪಿ. ಕೊಲೆಗೆ ಬಳಸಲಾಗಿದೆ ಎನ್ನಲಾದ ಎರಡು ಕಂಟ್ರಿ ಮೇಡ್ ಪಿಸ್ತೂಲುಗಳನ್ನು ಪೂರೈಸಿದ ಆರೋಪ ಆತನ ಮೇಲಿದೆ. ಗೋರಖಪುರದ ಲಾಡ್ಜ್‌ವೊಂದರಲ್ಲಿ ಅಡಗಿದ್ದ ಆತನನ್ನು ಖಚಿತ ಮಾಹಿತಿ ಆಧರಿಸಿ ಪೊಲೀಸರು ವಶಕ್ಕೆ ಪಡೆದು, ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ) ಅಡಿ ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಂಧಿತ ರೋವಾಬ್ ಅಲಿ ವಿರುದ್ಧ ಕೊಲೆ, ದರೋಡೆ, ಅಕ್ರಮ ಶಸ್ತ್ರಾಸ್ತ್ರ ಸೇರಿದಂತೆ ಸುಮಾರು 10 ಪ್ರಕರಣಗಳು ವಿವಿಧೆಡೆ ದಾಖಲಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ.

ಕಳೆದ ಏಪ್ರಿಲ್‌ನಲ್ಲಿ ಮುಂಡಗೋಡದಲ್ಲಿ ಜಮೀರ್ ಅಹ್ಮದ್ ದರ್ಗಾವಾಲೆ ಅವರ ಮೇಲೆ ಖಾರದ ಪುಡಿ ಎರಚಿ, ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಹಂತ ಹಂತವಾಗಿ ಆರೋಪಿಗಳನ್ನು ಬಂಧಿಸಿದ್ದರು.

ಈಗಾಗಲೇ ಬಂಧಿಸಲಾದ 11 ಆರೋಪಿಗಳ ಹಿನ್ನೆಲೆ ಪರಿಶೀಲಿಸಿದ ವೇಳೆ ಕೊಲೆ, ಕೊಲೆ ಯತ್ನ, ರೌಡಿಸಂ, ಡಕಾಯಿತಿ ಹಾಗೂ ಸುಲಿಗೆ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳು ಮತ್ತು ಅಪರಾಧ ದಾಖಲೆಗಳು ಪತ್ತೆಯಾಗಿದ್ದವು ಎಂದು ತಿಳಿದುಬಂದಿದೆ.

ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ ಕಾಜಗಾರ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳೊಂದಿಗೆ ಸೇರಿ ಸಂಘಟಿತವಾಗಿ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದ ಬಗ್ಗೆ ತನಿಖೆಯಲ್ಲಿ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, 11 ಆರೋಪಿಗಳ ವಿರುದ್ಧ ಈಗಾಗಲೇ ಕೋಕಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಬಂಧಿತ ರೋವಾಬ್ ಅಲಿಗೂ ಇದೇ ಕಾಯ್ದೆಯಡಿ ಕ್ರಮ ಜರುಗಿಸಲಾಗಿದೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಮಾಹಿತಿಗಳು ತನಿಖೆಯ ಬಳಿಕ ಹೊರಬರುವ ಸಾಧ್ಯತೆಯಿದೆ.

 

 

 

Please Share: