ಕರಾವಳಿ ವಾಯ್ಸ್ ನ್ಯೂಸ್ 

ಜೋಯಿಡಾ: ಆಕಸ್ಮಿಕವಾಗಿ ಬೆಂಕಿ ತಗುಲಿ ಬಡ ಕುಟುಂಬವೊಂದರ ಮನೆ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳಗೇರಿ ಗ್ರಾಮದಲ್ಲಿ ಕಳೆದ ಒಂದು ವಾರದ ಹಿಂದೆ ನಡೆದಿದೆ.

Banner Ad

ಸುಳಗೇರಿ ಗ್ರಾಮದ ದೀಪಕ ಚಿಂತಾಮಣಿ ನಾಯ್ಕ ಅವರಿಗೆ ಸೇರಿದ ಮನೆ ಬೆಂಕಿಗಾಹುತಿಯಾಗಿದ್ದು, ಮನೆಯಲ್ಲಿದ್ದ ಬಟ್ಟೆ, ಪಾತ್ರೆ ಸೇರಿದಂತೆ ದಿನಬಳಕೆಯ ಸಾಮಗ್ರಿಗಳು ಹಾಗೂ ಅಗತ್ಯ ದಾಖಲೆಗಳು ಸಂಪೂರ್ಣ ಸುಟ್ಟುಹೋಗಿವೆ. ಘಟನೆಯಿಂದ ಕುಟುಂಬಕ್ಕೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ.

ಅರಣ್ಯ ಇಲಾಖೆಯಲ್ಲಿ ತಾತ್ಕಾಲಿಕ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ದೀಪಕ ನಾಯ್ಕ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಇಬ್ಬರೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಏಕಾಏಕಿ ಸಂಭವಿಸಿದ ಬೆಂಕಿ ಅವಘಡದಿಂದ ಕುಟುಂಬವೇ ಆಘಾತಕ್ಕೊಳಗಾಗಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುವ ಆತಂಕ ಎದುರಾಗಿದೆ.

ಅರಣ್ಯ ಪ್ರದೇಶದಲ್ಲಿರುವ ಸುಳಗೇರಿ ಗ್ರಾಮವು ಕದ್ರಾದಿಂದ ಸುಮಾರು 30 ಕಿ.ಮೀ. ದೂರದಲ್ಲಿದೆ. ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಮಾನವೀಯ ನೆಲೆಯಲ್ಲಿ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ನೀಡಬೇಕು ಎಂದು ಸ್ಥಳೀಯ ಮುಖಂಡ ನಾಗರಾಜ ನಾಯ್ಕ ಆಗ್ರಹಿಸಿದ್ದಾರೆ.

ಅದೇ ರೀತಿ, ಸಂಕಷ್ಟದಲ್ಲಿರುವ ಕುಟುಂಬಕ್ಕೆ ಮಾನವೀಯತೆ ಆಧಾರದ ಮೇಲೆ ಸಹೃದಯಿಗಳು ತಮ್ಮ ಕೈಲಾದ ನೆರವು ನೀಡುವಂತೆ ಅವರು ಮನವಿ ಮಾಡಿದ್ದಾರೆ.

 

 

Please Share: