ಕರಾವಳಿ ವಾಯ್ಸ್ ನ್ಯೂಸ್ 

ಭಟ್ಕಳ: ಜಾಲಿಕೋಡಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಪಾತಿದೋಣಿ ಅಲೆಗಳ ರಭಸಕ್ಕೆ ಸಿಲುಕಿ ಮಗುಚಿದ ಪರಿಣಾಮ ಸಮುದ್ರಕ್ಕೆ ಬಿದ್ದ ಮೀನುಗಾರ ಮೃತಪಟ್ಟಿದ್ದು, ಬುಧವಾರ ಬೆಳಿಗ್ಗೆ ಅವರ ಮೃತದೇಹ ಮುಂಡಳ್ಳಿ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

Banner Ad

ಮೃತರನ್ನು ತಾಲೂಕಿನ ಜಾಲಿಕೋಡಿ ನಿವಾಸಿ ಮಂಜುನಾಥ ಬೇಟ್ಯಾ ಮೊಗೇರ (56) ಎಂದು ಗುರುತಿಸಲಾಗಿದೆ.

ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆ ಸುಮಾರಿಗೆ ಮಂಜುನಾಥ ಅವರು ಒಂಟಿಯಾಗಿ ಪಾತಿದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಸಮುದ್ರದಲ್ಲಿ ಏಕಾಏಕಿ ಅಲೆಗಳ ಅಬ್ಬರ ಹೆಚ್ಚಾಗಿ ದೋಣಿ ಮಗುಚಿದೆ. ಪರಿಣಾಮ ಅವರು ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಮೀನುಗಾರರು ಹಾಗೂ ಕರಾವಳಿ ಕಾವಲು ಪಡೆ (ಸಿಎಸ್‌ಪಿ) ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ, ನಿರಂತರ ಮಳೆ ಹಾಗೂ ಸಮುದ್ರದ ಪ್ರಕ್ಷುಬ್ಧ ಪರಿಸ್ಥಿತಿಯಿಂದ ಕಾರ್ಯಾಚರಣೆಗೆ ಅಡ್ಡಿಯುಂಟಾಗಿತ್ತು. ಮಂಗಳವಾರ ಸಂಜೆವರೆಗೂ ನಡೆಸಿದ ಶೋಧದಲ್ಲಿಯೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಬುಧವಾರ ಬೆಳಿಗ್ಗೆ ಭಟ್ಕಳದ ಮುಂಡಳ್ಳಿ ಸಮುದ್ರ ತೀರದಲ್ಲಿ ಮಂಜುನಾಥ ಅವರ ಮೃತದೇಹ ಕೊಚ್ಚಿಕೊಂಡು ಬಂದಿದ್ದು, ಸ್ಥಳೀಯರು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

 

 

Please Share: