ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ಮುರ್ಡೇಶ್ವರ ಸಮೀಪದ ಬಸ್ತಿ–ಕಾಯ್ಕಿಣಿ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರರೊಬ್ಬರು ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಅಪಘಾತದ ಬಳಿಕ ಅವೈಜ್ಞಾನಿಕ ಹಾಗೂ ವಿಳಂಬಗೊಂಡ ಹೆದ್ದಾರಿ ಕಾಮಗಾರಿಯೇ ದುರಂತಕ್ಕೆ ಕಾರಣ ಎಂದು ಆರೋಪಿಸಿ ಸ್ಥಳೀಯರು ಶವ ತೆರವಿಗೆ ತಡೆದು ಹೆದ್ದಾರಿಯಲ್ಲೇ ಪ್ರತಿಭಟನೆ ನಡೆಸಿದರು.
ಮೃತರನ್ನು ಕಾಯ್ಕಿಣಿ ಸಭಾತೀಯದ ಕೃಷ್ಣ ಶನಿಯಾರ ನಾಯ್ಕ (53) ಎಂದು ಗುರುತಿಸಲಾಗಿದೆ. ಅವರು ಸಾರದೊಳೆ ಹಳೆಕೋಟೆ ಹನುಮಂತ ದೇವಾಲಯದ ಆಡಳಿತ ಮಂಡಳಿಯ ಟ್ರಸ್ಟಿಯಾಗಿದ್ದರು.
ಮಂಗಳೂರಿನಿಂದ ಬೆಳಗಾವಿ ಕಡೆಗೆ ಸಾಗುತ್ತಿದ್ದ ಲಾರಿಯು ಬಸ್ತಿ–ಕಾಯ್ಕಿಣಿ ಬಳಿ ರಸ್ತೆ ತಿರುವಿನಲ್ಲಿ ನಿಂತಿದ್ದ ಕಾರನ್ನು ತಪ್ಪಿಸುವ ಭರದಲ್ಲಿ ಮಾರ್ಗದ ದಿಕ್ಕು ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಬಳಿಕ ನಿಯಂತ್ರಣ ತಪ್ಪಿದ ಲಾರಿಯು ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿಕೊಂಡಿದ್ದ ಕೃಷ್ಣ ನಾಯ್ಕ ಅವರ ಮೇಲೆ ಹರಿದಿದೆ. ಲಾರಿಯ ಚಕ್ರದಡಿಗೆ ಸಿಲುಕಿದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ತೀವ್ರತೆಗೆ ಲಾರಿಯ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.
ಅಪಘಾತದ ನಂತರ ಲಾರಿಯಡಿಯಲ್ಲಿ ಸಿಲುಕಿದ್ದ ಮೃತದೇಹವನ್ನು ಹೊರತೆಗೆಯಲು ಅಧಿಕಾರಿಗಳು ಮುಂದಾದಾಗ, ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಹಲವು ತಿಂಗಳಿಂದ ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಅವೈಜ್ಞಾನಿಕ ಕಾಮಗಾರಿಯಿಂದಲೇ ನಿರಂತರ ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿದ ಸಾರ್ವಜನಿಕರು, ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಭರವಸೆ ಸಿಗುವವರೆಗೆ ಶವ ತೆರವಿಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆ ಕಂಪನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿದ ಸ್ಥಳೀಯರು ಹೆದ್ದಾರಿಯಲ್ಲೇ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು.
ಘಟನೆ ಕುರಿತು ಮಾಹಿತಿ ಪಡೆದ ಉಪವಿಭಾಗಾಧಿಕಾರಿ ಮಹೇಶ್ ಹಾಗೂ ಡಿವೈಎಸ್ಪಿ ಗಿರೀಶ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಇದೇ ವೇಳೆ ಗುತ್ತಿಗೆ ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ಬರಲು ಹಿಂದೇಟು ಹಾಕುತ್ತಿರುವುದಕ್ಕೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಅಧಿಕಾರಿಗಳ ಮನವೊಲಿಕೆ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪ್ರಯತ್ನಗಳು ಮುಂದುವರಿದಿವೆ. ಅಪಘಾತದ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
