ಕರಾವಳಿ ವಾಯ್ಸ್ ನ್ಯೂಸ್
ದಾಂಡೇಲಿ: ನಗರದ ಹಳಿಯಾಳ ರಸ್ತೆಯ ಥರ್ಡ್ ನಂಬರ್ ಗೇಟ್ ಸಮೀಪ ಎರಡು ಬೈಕುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ಅಪಘಾತದಲ್ಲಿ 14ನೇ ಬ್ಲಾಕ್ ನಿವಾಸಿ ಎಬೆಲ್ ನಾಗಯ್ಯ ಮಾದರ, ಗಾಂಧಿನಗರ ನಿವಾಸಿ ವಸೀಪ್ ರಜಾ ಸಲೀಂ ಮುಲ್ಲಾ ಹಾಗೂ ಮಾರುತಿ ನಗರ ನಿವಾಸಿ ಜುನೇದ ಬಾಷಾ ಸುಲೇಮಾನ ಇಟಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತಕ್ಷಣ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಎಬೆಲ್ ನಾಗಯ್ಯ ಮಾದರ ಹಾಗೂ ವಸೀಪ್ ರಜಾ ಸಲೀಂ ಮುಲ್ಲಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ರವಾನಿಸಲಾಗಿದೆ. ಜುನೇದ ಬಾಷಾ ಸುಲೇಮಾನ ಇಟಗಿ ಅವರಿಗೆ ಸಾರ್ವಜನಿಕ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿದಿದೆ.
ಕೆ.ಸಿ. ವೃತ್ತದ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನ ಹಾಗೂ ಹಳಿಯಾಳ ರಸ್ತೆಯ ಕಡೆಯಿಂದ ಸಾಗುತ್ತಿದ್ದ ಮತ್ತೊಂದು ದ್ವಿಚಕ್ರ ವಾಹನ ಥರ್ಡ್ ನಂಬರ್ ಗೇಟ್ ಸಮೀಪ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
