ಕರಾವಳಿ ವಾಯ್ಸ್ ನ್ಯೂಸ್ 

ಸಿದ್ದಾಪುರ: ತಾಲೂಕಿನ ಹಾಳದಕಟ್ಟಾದ ಸೊರಬ ರಸ್ತೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ ಕತ್ತಿ ತೋರಿಸಿ ಮಹಿಳೆಯ ಕುತ್ತಿಗೆಯಲ್ಲಿದ್ದ ಬಂಗಾರದ ತಾಳಿ ಸರ ಕಸಿದುಕೊಂಡು ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಕುರಿತು ಪೂನಮ್ ಗಣಪತಿ ಶೇಟ್ (42) ಅವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಪ್ರಕಾರ, ಜೂನ್ 22ರಂದು ಸಂಜೆ ಸುಮಾರು 4.22 ಗಂಟೆಗೆ 25 ರಿಂದ 30 ವರ್ಷದೊಳಗಿನ ಅಪರಿಚಿತ ವ್ಯಕ್ತಿಯೊಬ್ಬ ಕತ್ತಿ ಹಿಡಿದು ಮನೆಗೆ ನುಗ್ಗಿ, “ಬಂಗಾರ ಕೊಡು” ಎಂದು ಬೆದರಿಕೆ ಹಾಕಿದ್ದಾನೆ. ಬಳಿಕ ಮಹಿಳೆಯ ಕುತ್ತಿಗೆಯಲ್ಲಿದ್ದ ತಾಳಿ ಸರ ಕಸಿದುಕೊಳ್ಳಲು ಯತ್ನಿಸಿದ್ದಾನೆ.

ಈ ವೇಳೆ ಮಹಿಳೆ ಪ್ರತಿರೋಧ ತೋರಿದಾಗ, ಆರೋಪಿ ತಾಳಿ ಸರವನ್ನು ಬಲವಂತವಾಗಿ ಎಳೆದಿದ್ದು, ಸರ ತುಂಡಾಗಿ ಸುಮಾರು 20.5 ಗ್ರಾಂ ತೂಕದ ಬಂಗಾರದ ತಾಳಿ ಸರ ಹಾಗೂ ಆಂಟಿಕ್ ಕ್ವಾಯಿನ್ ಸೇರಿ ಅಂದಾಜು ₹3 ಲಕ್ಷ ಮೌಲ್ಯದ ಆಭರಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಘಟನೆಯಲ್ಲಿ ಮಹಿಳೆಯ ಕುತ್ತಿಗೆಗೆ ಗಾಯಗಳಾಗಿವೆ.

ಘಟನೆ ಕುರಿತು ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ಠಾಣೆಗೆ ದೂರು ನೀಡಲು ತಡವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಕಲಂ 309(6) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

Please Share: