ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ, ಜೂ.24: ವಿಷಪೂರಿತ ಹಾವು ಕಚ್ಚಿದ ಪರಿಣಾಮ ಆರನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, ಆತನ ಸಹೋದರಿ ಚಿಕಿತ್ಸೆ ಪಡೆಯುತ್ತಿರುವ ದುರ್ಘಟನೆ ತಾಲೂಕಿನ ಬನವಾಸಿ ಪೊಲೀಸ್ ಠಾಣೆ ವ್ಯಾಪ್ತಿಯ ಸಹಸ್ರಳ್ಳಿ ಗ್ರಾಮದಲ್ಲಿ ಬುಧವಾರ ಮುಂಜಾನೆ ನಡೆದಿದೆ.

Banner Ad

ಮೃತ ವಿದ್ಯಾರ್ಥಿಯನ್ನು ಮಿಥುನ್ ಪುಟ್ಟಪ್ಪ ನಾಯ್ಕ (12) ಎಂದು ಗುರುತಿಸಲಾಗಿದೆ. ಹಾವಿನ ಕಡಿತಕ್ಕೊಳಗಾದ ಆತನ ಸಹೋದರಿ ದೀಕ್ಷಾ ಪುಟ್ಟಪ್ಪ ನಾಯ್ಕ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಮಾಹಿತಿಯಂತೆ, ಮಿಥುನ್ ಮತ್ತು ದೀಕ್ಷಾ ಮಂಗಳವಾರ ರಾತ್ರಿ ಊಟ ಮುಗಿಸಿ ತಂದೆಯೊಂದಿಗೆ ಮನೆಯಲ್ಲೇ ಮಲಗಿದ್ದರು. ಮುಂಜಾನೆ ವೇಳೆ ಇಬ್ಬರೂ ಏಕಾಏಕಿ ಎದ್ದು ವಾಂತಿ ಮಾಡತೊಡಗಿದ್ದು, ಇದನ್ನು ಗಮನಿಸಿದ ಪಾಲಕರು ಮನೆಯ ದೀಪ ಹಚ್ಚಿ ಪರಿಶೀಲಿಸಿದಾಗ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿರುವುದು ಕಂಡುಬಂದಿದೆ. ಇದೇ ವೇಳೆ ಮನೆಯೊಳಗಿಂದ ಹಾವೊಂದು ಹೊರಗೆ ಹೋಗಿರುವುದನ್ನು ಗಮನಿಸಲಾಗಿದೆ.

ತಕ್ಷಣ ಮಕ್ಕಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿರಸಿಯ ಮಹಾಲಕ್ಷ್ಮೀ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಿಥುನ್ ಚಿಕಿತ್ಸೆ ಫಲಕಾರಿಯಾಗದೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ದೀಕ್ಷಾ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾಳೆ.

ವೈದ್ಯರ ಪ್ರಾಥಮಿಕ ಪರಿಶೀಲನೆಯಲ್ಲಿ ಮಿಥುನ್‌ನ ಕಿವಿಗೆ ಹಾಗೂ ದೀಕ್ಷಾಳ ಕೈ ಬೆರಳಿಗೆ ವಿಷಪೂರಿತ ಹಾವು ಕಚ್ಚಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಮಾಹಿತಿ ಪಡೆದ ಬನವಾಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

 

 

 

Please Share: