ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ನಗರದ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದ್ದ ಚಾಕು ಇರಿತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಹಿನ್ನೆಲೆಯಲ್ಲಿ ಪ್ರಕರಣ ಇದೀಗ ಕೊಲೆ ಪ್ರಕರಣವಾಗಿ ಪರಿವರ್ತನೆಯಾಗಿದೆ.

Banner Ad

ಮೃತ ಯುವಕನನ್ನು ರೋಷನ್ ಪ್ರದೀಪ್ ಹುಲಸ್ವಾರ (21) ಎಂದು ಗುರುತಿಸಲಾಗಿದೆ. ಈ ಸಂಬಂಧ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಇದೀಗ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 103ರಡಿ ಕೊಲೆ ಆರೋಪವನ್ನು ಸೇರಿಸಲಾಗಿದೆ.

ಪೊಲೀಸ್ ಮಾಹಿತಿಯಂತೆ, ಜೂನ್ 7ರಂದು ರಾತ್ರಿ ಸುಮಾರು 9.30ರ ವೇಳೆಗೆ ಕಾರವಾರದ ನದಿವಾಡದ ಸಂತೋಷಿಮಾತಾ ದೇವಸ್ಥಾನದ ಎದುರಿನ ಮೈದಾನದಲ್ಲಿ ರೋಷನ್ ಹಾಗೂ ಸಂಜಯ್ ಸತೀಶ ಮಾಂಗ್ರೇಕರ್ ನಡುವೆ ಮಾತಿನ ಚಕಮಕಿ ನಡೆದಿದೆ. ವಾಗ್ವಾದ ತೀವ್ರಗೊಂಡು ಜಗಳಕ್ಕೆ ತಿರುಗಿದ ವೇಳೆ, ಆರೋಪಿತ ಸಂಜಯ್ ಅಲ್ಲೇ ಇದ್ದ ಚಾಕುವಿನಿಂದ ರೋಷನ್ ಅವರ ಎಡ ಹೊಟ್ಟೆ ಭಾಗಕ್ಕೆ ಇರಿದಿದ್ದಾನೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡ ರೋಷನ್ ಅವರನ್ನು ಮೊದಲಿಗೆ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಹಾಗೂ ನಂತರ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 21ರಂದು ಬೆಳಿಗ್ಗೆ 8.49ಕ್ಕೆ ಅವರು ಮೃತಪಟ್ಟಿದ್ದಾರೆ.

ಈ ಕುರಿತು ರೋಷನ್ ಅವರ ಸಹೋದರ ಪ್ರಜ್ವಲ್ ಪ್ರದೀಪ್ ಹುಲಸ್ವಾರ ನೀಡಿದ ದೂರಿನ ಮೇರೆಗೆ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಗಾಯಾಳುವಿನ ಸಾವಿನ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಕೊಲೆ ಆರೋಪದ ಕಲಂ ಸೇರಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

 

Please Share: