ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸ್‌ಟೇಬಲ್‌ರೊಬ್ಬರು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಕಾರವಾರದಲ್ಲಿ ನಡೆದಿದೆ.
ಮೃತರನ್ನು ಸುನೀಲ ಅಪ್ಪಣ್ಣ ಕೋಳಿ (46) ಎಂದು ಗುರುತಿಸಲಾಗಿದೆ. ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿವಾಸಿಯಾಗಿದ್ದ ಅವರು ಪ್ರಸ್ತುತ ಕಾರವಾರ ಡಿಎಆರ್ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಜೂನ್ 17ರಂದು ಬೆಳಗ್ಗೆಯಿಂದಲೇ ಆರೋಗ್ಯದಲ್ಲಿ ಏರುಪೇರಾಗಿದ್ದ ಅವರು ಡಿಎಆರ್ ಕಚೇರಿಯ ವಿಶ್ರಾಂತಿ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು ಎನ್ನಲಾಗಿದೆ.
ಮಧ್ಯಾಹ್ನ ವೇಳೆಗೆ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು, ಸಹೋದ್ಯೋಗಿಗಳು ತಕ್ಷಣ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತರ ತಂದೆ ಕಾರವಾರ ಶಹರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಸಾವಿನ ಕುರಿತು ಯಾವುದೇ ಅನುಮಾನ ಇಲ್ಲ ಎಂದು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಸಂಬಂಧ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
