ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ, ಜೂ. 18: ತಾಲೂಕಿನ ಹಣಕೋಣ ಸಮೀಪದ ಕಾಳಿ ನದಿಯಲ್ಲಿ ಬುಧವಾರ ಕಣ್ಮರೆಯಾಗಿದ್ದ ವ್ಯಕ್ತಿಯ ಮೃತದೇಹ ಗುರುವಾರ ಪತ್ತೆಯಾಗಿದೆ.

ಮೃತರನ್ನು ಸತೀಶ ಮಾಳ್ಸೇಕರ ಎಂದು ಗುರುತಿಸಲಾಗಿದೆ. ಅವರು ಮೂಲತಃ ಹೊಡ್ಲೇಬಾಗ-ಮುಡಗೇರಿ ನಿವಾಸಿಯಾಗಿದ್ದು, ಪ್ರಸ್ತುತ ಕಾರವಾರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ನೌಕಾನೆಲೆ ಪ್ರದೇಶದಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದ ಅವರು ಬುಧವಾರ ಹಣಕೋಣದ ರಿವರ್ ಎಡ್ಜ್ ಪ್ಯಾರಡೈಸ್ ರೆಸೋರ್ಟ್‌ನ ಕಯಾಕ್ ಬೋಟ್‌ನಲ್ಲಿ ಕಾಳಿ ನದಿಗೆ ತೆರಳಿದ್ದರು.

ಈ ವೇಳೆ ಅವರು ನದಿಯಲ್ಲಿ ಕಣ್ಮರೆಯಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಸ್ಥಳೀಯರು ಹಾಗೂ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಗುರುವಾರ ನದಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಸತೀಶ ಮಾಳ್ಸೇಕರ ಅವರು ಸುಮಾರು ಎಂಟು ವರ್ಷಗಳ ಹಿಂದೆ ಇದೇ ರಿವರ್ ಎಡ್ಜ್ ಪ್ಯಾರಡೈಸ್ ರಿಸೋರ್ಟ್‌ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು ಎಂದು ತಿಳಿದುಬಂದಿದೆ. ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮೃತರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು, ಬಂಧು-ಬಳಗ ಹಾಗೂ ಸ್ನೇಹಿತರಲ್ಲಿ ಶೋಕ ಮಡುಗಟ್ಟಿದೆ.

 

Please Share: