ಕರಾವಳಿ ವಾಯ್ಸ್ ನ್ಯೂಸ್
ಜೋಯಿಡಾ: ತಾಲೂಕಿನ ರಾಮನಗರ–ಜೋಯಿಡಾ ಮುಖ್ಯರಸ್ತೆಯ ಚಾಪೋಲಿ ಕ್ರಾಸ್ ಸಮೀಪ ಗುರುವಾರ ಬೆಳಿಗ್ಗೆ ಎರಡು ಕೆಎಸ್ಆರ್ಟಿಸಿ ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಬಸ್ ಚಾಲಕ ಸೇರಿದಂತೆ 32ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.
ಉಳವಿ–ಇಚಲಕರಂಜಿ ಹಾಗೂ ಬೆಳಗಾವಿ–ಅಂಕೋಲಾ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಅಪಘಾತದಲ್ಲಿ ಒಬ್ಬ ಬಸ್ ಚಾಲಕ ಗಾಯಗೊಂಡಿದ್ದು, ಬಸ್ನಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ವಿಶೇಷವಾಗಿ ಬೆಳಗಾವಿ–ಅಂಕೋಲಾ ಬಸ್ನಲ್ಲಿ ಜೋಯಿಡಾಕ್ಕೆ ತೆರಳುತ್ತಿದ್ದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಅಪಘಾತ ಸಂಭವಿಸಿದ ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಸೌಲಭ್ಯ ಇಲ್ಲದ ಕಾರಣ, ಕೆಲ ಪ್ರಯಾಣಿಕರು ಸಮೀಪದ ಗುಡ್ಡ ಏರಿ ಆಂಬುಲೆನ್ಸ್ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಗಾಯಾಳುಗಳನ್ನು ತಕ್ಷಣ ಜೋಯಿಡಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಅಪಘಾತದ ನಿಖರ ಕಾರಣ ಹಾಗೂ ಗಾಯಾಳುಗಳ ವಿವರ ಸೇರಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ.
