ಕರಾವಳಿ ವಾಯ್ಸ್ ನ್ಯೂಸ್ 

BANGALORE: ನೀಟ್ ಯುಜಿ (NEET UG) 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಉತ್ತರ ಕನ್ನಡ ಹಾಗೂ ಕರ್ನಾಟಕ ರಾಜ್ಯ ಸಮಿತಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

Banner Ad

ಮೇ 3ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಸುಮಾರು 22 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು. ಆದರೆ, ರಾಜಸ್ಥಾನದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಹಿನ್ನೆಲೆ ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆ ನಡೆಸುವುದಾಗಿ NTA ಘೋಷಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ SFI ಮುಖಂಡ ವೀರೇಶ ರಾಠೋಡ, ಆರಂಭದಿಂದಲೇ ಪರೀಕ್ಷೆಗಳ ದುರುಪಯೋಗಕ್ಕೆ ಕುಖ್ಯಾತಿಯಾಗಿರುವ NTA ತನ್ನ ಅಸಮರ್ಥತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಆರೋಪಿಸಿದರು. ಒಟ್ಟು 720 ಅಂಕಗಳಲ್ಲಿ ಸುಮಾರು 600 ಅಂಕಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಸೋರಿಕೆಯಾಗಿದ್ದು, 180 ಪ್ರಶ್ನೆಗಳಲ್ಲಿ 15 ಪ್ರಶ್ನೆಗಳು ಮುಂಚಿತವಾಗಿ ಹರಿದಾಡಿದ್ದವು ಹಾಗೂ ರಸಾಯನಶಾಸ್ತ್ರ ವಿಭಾಗದ ಸುಮಾರು 120 ಪ್ರಶ್ನೆಗಳು ಅಕ್ಷರಶಃ ಸೋರಿಕೆಯಾಗಿದ್ದವೆಂದು ವರದಿಗಳು ತಿಳಿಸಿವೆ ಎಂದರು.

ಪರೀಕ್ಷಾ ವ್ಯವಸ್ಥೆಯನ್ನು ಕೇಂದ್ರೀಕರಿಸುವ ಮೋದಿ ಸರ್ಕಾರದ ನೀತಿಯೇ ಇಂತಹ ಅವ್ಯವಸ್ಥೆಗೆ ಕಾರಣವಾಗಿದ್ದು, ದೇಶದಾದ್ಯಂತ ಪರೀಕ್ಷಾ ಮಾಫಿಯಾಗಳ ಹುಟ್ಟಿಗೆ ಉತ್ತೇಜನ ನೀಡಿದೆ ಎಂದು ಅವರು ದೂರಿದರು. ಕೋಚಿಂಗ್ ಮಾಫಿಯಾಗಳ ಪ್ರಭಾವದಿಂದ ಮಧ್ಯಮ ವರ್ಗದ ವಿದ್ಯಾರ್ಥಿಗಳು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದೂ ಆರೋಪಿಸಿದರು.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು, ವಿದ್ಯಾರ್ಥಿಗಳಿಗೆ NTA ಪರಿಹಾರ ನೀಡಬೇಕು, NTA ಸಂಸ್ಥೆಯನ್ನು ರದ್ದುಪಡಿಸಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಬೇಕು ಎಂದು SFI ಆಗ್ರಹಿಸಿದೆ.

 

 

Please Share: