ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ, ಮೇ 31: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದ ಅವಧಿಯಲ್ಲಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಜೂನ್‌ 1ರಿಂದ ಆಗಸ್ಟ್‌ 31ರವರೆಗೆ ಜಲಕ್ರೀಡೆ ಹಾಗೂ ಸಮುದ್ರ ಆಧಾರಿತ ಸಾಹಸ ಚಟುವಟಿಕೆಗಳನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಲಕ್ಷ್ಮೀ ಪ್ರಿಯಾ ಕೆ ಅವರು ವಿಪತ್ತು ನಿರ್ವಹಣಾ ಕಾಯ್ದೆ-2005ರ ಸೆಕ್ಷನ್‌ 33 ಮತ್ತು 34ರಡಿ ಈ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಾದ್ಯಂತ ರಿವರ್‌ ರಾಫ್ಟಿಂಗ್‌, ಬೋಟಿಂಗ್‌, ಜೆಟ್‌ ಸ್ಕೀಯಿಂಗ್‌, ಕಯಾಕಿಂಗ್‌, ಬನಾನಾ ಸವಾರಿ, ಪ್ಯಾರಾಸೈಲಿಂಗ್‌, ಸ್ಪೀಡ್‌ ಬೋಟ್‌ ಸವಾರಿ, ಸ್ಕೂಬಾ ಡೈವಿಂಗ್‌ ಸೇರಿದಂತೆ ವಿವಿಧ ಜಲಕ್ರೀಡೆ ಹಾಗೂ ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

ಜಿಲ್ಲೆಯ ನದಿಗಳು, ಹಿನ್ನೀರು ಪ್ರದೇಶಗಳು, ಜಲಾಶಯಗಳು, ನದೀಮುಖಗಳು ಹಾಗೂ ಕರಾವಳಿ ಭಾಗಗಳಲ್ಲಿ ಮಳೆಗಾಲದ ವೇಳೆ ಭಾರೀ ಮಳೆ, ದಿಢೀರ್‌ ಪ್ರವಾಹ, ಸಮುದ್ರದ ಅಬ್ಬರ, ಎತ್ತರದ ಅಲೆಗಳು ಹಾಗೂ ಬಲವಾದ ಗಾಳಿಯಿಂದ ಮಾನವ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜಿಲ್ಲೆಯ ಎಲ್ಲಾ ತಹಶೀಲ್ದಾರರು, ಪೊಲೀಸ್‌ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಮೀನುಗಾರಿಕೆ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಲಾಗಿದೆ.

ಆದೇಶ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯ ವಿವಿಧ ವಿಧಿಗಳಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

 

Please Share: