ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಗೋವಾದ ಬೇತುಲ್ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಷಿನ್ ಬೋಟ್ೊಂದು ರವಿವಾರ ಸಂಜೆ ಆಳ ಸಮುದ್ರದಲ್ಲಿ ಮುಳುಗಿದ ಘಟನೆ ನಡೆದಿದೆ. ಬೋಟ್ನಲ್ಲಿದ್ದ 22 ಮೀನುಗಾರರನ್ನು ಮತ್ತೊಂದು ಮೀನುಗಾರಿಕಾ ಬೋಟ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ.
ಮುದಗಾ ಬಂದರಿನ ದಿನೇಶ ಕಾಂಚನ್ ಮಾಲೀಕತ್ವದ “ಶ್ರೀ ಅಮ್ಮ” ಹೆಸರಿನ ಪರ್ಷಿನ್ ಬೋಟ್ ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ಏಕಾಏಕಿ ಸಮುದ್ರದಲ್ಲಿ ಮುಳುಗಡೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಮುದಗಾ ಬಂದರಿನ ನರೇಶ್ ತಾಂಡೇಲ ಮಾಲೀಕತ್ವದ “ಜಲರಾಜ” ಬೋಟ್ ರಕ್ಷಣಾ ಕಾರ್ಯಕ್ಕೆ ಧಾವಿಸಿದೆ.
ಮುಳುಗಿದ “ಶ್ರೀ ಅಮ್ಮ” ಬೋಟ್ನಲ್ಲಿದ್ದ ಎಲ್ಲಾ 22 ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿ ದಡಕ್ಕೆ ಕರೆತರಲಾಗಿದೆ. ಘಟನೆಯ ಬಳಿಕ ಸೋಮವಾರವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸ್ಥಳೀಯ ಆರು ಮೀನುಗಾರಿಕಾ ಬೋಟ್ಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ.
ಎರಡು ಬಲೆಗಳ ಸಮೇತ ಪರ್ಷಿನ್ ಬೋಟ್ ಸಮುದ್ರದಲ್ಲೇ ಸಿಲುಕಿಕೊಂಡಿದ್ದು, ಘಟನೆಯಿಂದ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಮುಳುಗಿದ ಬೋಟ್ ಹಾಗೂ ಬಲೆಗಳನ್ನು ಸುರಕ್ಷಿತವಾಗಿ ದಡಕ್ಕೆ ತರಲು ಕಾರವಾರದ ಮುದಗಾ ಬಂದರಿನಿಂದ 10ಕ್ಕೂ ಹೆಚ್ಚು ಮೀನುಗಾರಿಕಾ ಬೋಟ್ಗಳು ಸಮುದ್ರದತ್ತ ತೆರಳಿದ್ದು, ಕಾರ್ಯಾಚರಣೆ ಮುಂದುವರಿದಿದೆ.
