ಕರಾವಳಿ ವಾಯ್ಸ್ ನ್ಯೂಸ್ 

ಕುಮಟಾ: ತಾಲೂಕಿನ ಮೂರೂರು ಗ್ರಾಮದಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಲು ಯತ್ನಿಸಿರುವ ಆರೋಪದ ಪ್ರಕರಣ ಬೆಳಕಿಗೆ ಬಂದಿದ್ದು, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ.ಐ. ಹೆಗಡೆ ವಿರುದ್ಧ ಗ್ರಾಮಸ್ಥರು ಗಂಭೀರ ಆರೋಪಗಳನ್ನು ಮಾಡಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.

ಗ್ರಾಮದ ಸರ್ವೆ ನಂ. 191ರಲ್ಲಿ ಸುಮಾರು 3 ಎಕರೆ ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಆಕ್ರಮಿಸಲು ಪ್ರಯತ್ನ ನಡೆದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ವಿಷಯ ತಿಳಿದ ತಕ್ಷಣ ಸುಮಾರು 500ಕ್ಕೂ ಹೆಚ್ಚು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ, ನಡೆಯುತ್ತಿದ್ದ ಕಾರ್ಯವನ್ನು ತಡೆಹಿಡಿದಿದ್ದಾರೆ.

ಗ್ರಾಮಸ್ಥರ ಪ್ರಕಾರ, ಈ ಪ್ರದೇಶದಲ್ಲಿ “ಜಟಕ ದೇವರು” ಎಂಬ ಪವಿತ್ರ ಸ್ಥಳವಿದ್ದು, ಸುಮಾರು 700ಕ್ಕೂ ಹೆಚ್ಚು ಮನೆಗಳವರು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಈ ಜಾಗವನ್ನು ಬಳಸುತ್ತಿದ್ದರು. ಇಂತಹ ಸ್ಥಳವನ್ನು ಒತ್ತುವರಿ ಮಾಡಲಾಗುತ್ತಿದೆ ಎಂಬ ಆರೋಪದಿಂದ ಗ್ರಾಮದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಇದೇ ವೇಳೆ, ಖಾಸಗಿ ವ್ಯಕ್ತಿಯೊಬ್ಬರು ಖರೀದಿ ಮಾಡಿರುವ ಇಳಿಜಾರು ಪ್ರದೇಶದ ಬದಲಾಗಿ, ಸಮತಟ್ಟಾದ ಅರಣ್ಯ ಪ್ರದೇಶದ 3 ಎಕರೆ ಜಾಗವನ್ನು ನೀಡಲು ಒಪ್ಪಂದ ನಡೆದಿದೆ ಎಂಬ ಮಾಹಿತಿ ಸಹ ಹೊರಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಗ್ರಾಮಸ್ಥರ ಹೇಳಿಕೆಯಂತೆ, 2021ರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ನಂತರ ತಹಶೀಲ್ದಾರರು ನಡೆಸಿದ ಪರಿಶೀಲನೆಯಲ್ಲಿ, ಈ ಜಾಗವು ಕಂದಾಯ ಇಲಾಖೆಗೆ ಸೇರಿಲ್ಲದೆ ಅರಣ್ಯ ಇಲಾಖೆಗೆ ಸೇರಿದೆ ಎಂದು ಲಿಖಿತವಾಗಿ ದೃಢಪಡಿಸಲಾಗಿದೆ.

ಆದರೂ ಸಹ, ರಾಜಕೀಯ ಒತ್ತಡದ ಮೂಲಕ ಸರ್ವೆ, ಗಡಿ ಗುರುತಿಸುವಿಕೆ ಹಾಗೂ ಬೇಲಿ ನಿರ್ಮಾಣದಂತಹ ಚಟುವಟಿಕೆಗಳನ್ನು ಮುಂದುವರಿಸಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ 200ಕ್ಕೂ ಹೆಚ್ಚು ಗ್ರಾಮಸ್ಥರು ಸ್ಥಳಕ್ಕೆ ತೆರಳಿ, ಜಿ.ಐ. ಹೆಗಡೆ ಅವರನ್ನು ಪ್ರಶ್ನಿಸಿ, ಒತ್ತುವರಿ ಕಾರ್ಯವನ್ನು ತಡೆದಿದ್ದಾರೆ.

ಈ ಪ್ರಕರಣದ ಕುರಿತು ತಕ್ಷಣ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಜೊತೆಗೆ, ರಾಜಕೀಯ ಪ್ರಭಾವ ಬಳಸಿ ಇಂತಹ ಚಟುವಟಿಕೆಗಳನ್ನು ಮುಂದುವರಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಹರ್ಷ ಹೆಗಡೆ (ಸದಸ್ಯರು, ಗ್ರಾಮ ಪಂಚಾಯತ್ ಮೂರೂರು), ಮಾದೇವ ನಾಯ್ಕ್ (ಮಾಜಿ ಸದಸ್ಯರು, ಗ್ರಾಮ ಪಂಚಾಯತ್ ಮೂರೂರು), ಭಾರತಿ ನಾಯ್ಕ್ (ಅಧ್ಯಕ್ಷರು, ಗ್ರಾಮ ಪಂಚಾಯತ್ ಮೂರೂರು), ನಾಗೇಶ ನಾಯ್ಕ್ (ಮೂರೂರು), ಗಣೇಶ್ ಮುಕ್ರಿ, ಈಶ್ವರ ಮುಕ್ರಿ, ವಿಷ್ಣು ಗೌಡ (ಕೇರ್ಗಜನಿ), ಭಾಸ್ಕರ್ ಮಡಿವಾಳ (ಮೂರೂರು), ಈಶ್ವರ ನಾಯ್ಕ್ (ಮೂರೂರು), ಕುಪ್ಪು ಗೌಡ, ವೆಂಕಟಿ ಮುಕ್ರಿ (ಮೂರೂರು) ಉಪಸ್ಥಿತರಿದ್ದರು.

 

 

Please Share: