ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ, ಏ.23: ನಗರದ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ, ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಸಿದ್ದಾಪುರ ತಾಲೂಕಿನ ಹೆರೂರು ಗ್ರಾಮದ 21 ವರ್ಷದ ಅಬ್ದುಲ್ ಖುದ್ದುಸ್ ಅಬ್ದುಲ್ ಗನಿ ಎಂದು ಗುರುತಿಸಲಾಗಿದೆ. ಈತನಿಂದ ಕಳುವಾಗಿದ್ದ ಚಿನ್ನಾಭರಣಗಳು, ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಏಪ್ರಿಲ್ 18ರ ರಾತ್ರಿ 7.30ರಿಂದ ಏಪ್ರಿಲ್ 19ರ ಬೆಳಿಗ್ಗೆ 11 ಗಂಟೆಯ ನಡುವಿನ ಅವಧಿಯಲ್ಲಿ ಈ ಕಳ್ಳತನ ನಡೆದಿತ್ತು. ಮನೆಯ ಮುಂಬಾಗಿಲನ್ನು ಗಟ್ಟಿಯಾದ ವಸ್ತುವಿನಿಂದ ಮೀಟಿ ಒಳನುಗ್ಗಿದ ಆರೋಪಿ, ಟ್ರೆಜರಿ ಬಾಗಿಲನ್ನೂ ಒಡೆದು ಸುಮಾರು ₹1 ಲಕ್ಷ ನಗದು ಹಾಗೂ ₹1.30 ಲಕ್ಷ ಮೌಲ್ಯದ 8 ಗ್ರಾಂ ತೂಕದ ಎರಡು ಬಂಗಾರದ ಉಂಗುರಗಳನ್ನು ಕಳವು ಮಾಡಿದ್ದ. ಈ ಕುರಿತು ಸಂತ್ರಸ್ತರ ದೂರಿನ ಮೇರೆಗೆ ಹೊಸ ಮಾರುಕಟ್ಟೆ ಠಾಣೆಯಲ್ಲಿ ಕಲಂ 331(3), 331(4) ಮತ್ತು 305ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಚುರುಕುಗೊಳಿಸಿದ ಪೊಲೀಸರು ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಆತನಿಂದ ₹10,430 ನಗದು, 8 ಗ್ರಾಂ ತೂಕದ ಎರಡು ಬಂಗಾರದ ಉಂಗುರಗಳು, ಕೃತ್ಯಕ್ಕೆ ಬಳಸಿದ್ದ ಮಚ್ಚು, ಸ್ಕ್ಯಾನರ್ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಡಿವೈಎಸ್‌ಪಿ ಗೀತಾ ಪಾಟೀಲ್ ಹಾಗೂ ಸಿಪಿಐ ಶಶಿಕಾಂತ ವರ್ಮಾ ಮಾರ್ಗದರ್ಶನ ನೀಡಿದರು. ಪಿಎಸ್‌ಐ ಬಸವರಾಜ ಕನಶೆಟ್ಟಿ ನೇತೃತ್ವದಲ್ಲಿ ಎಎಸ್‌ಐ ಮಂಗಳಮೂರ್ತಿ ಶಿರಹಟ್ಟಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಭಾಗವಹಿಸಿದವರನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.

 

 

Please Share: