ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದ 51 ವರ್ಷದ ವೈದ್ಯರನ್ನು ಮದುವೆಯ ಮುನ್ನ ದಿನವೇ ದುಷ್ಕರ್ಮಿಗಳು ಹತ್ಯೆಗೈದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ನಡೆದಿದೆ.
ಶಿರಸಿಯ ನ್ಯೂ ಕೆ.ಎಚ್.ಬಿ ಕಾಲೋನಿಯ ನಿವಾಸಿ ಡಾ. ರಮೇಶ್ ಕಲಗುಟಕರ (51) ಕೊಲೆಯಾದ ವೈದ್ಯರಾಗಿದ್ದಾರೆ. ನಾಳೆ (ಸೋಮವಾರ) ಮಂಜಗುಣಿ ಗ್ರಾಮದ ವೆಂಕಟರಮಣ ದೇವಸ್ಥಾನದಲ್ಲಿ ಇವರ ಎರಡನೇ ಮದುವೆ ನಿಶ್ಚಯವಾಗಿತ್ತು.
ಬೈಲಹೊಂಗಲ ಮೂಲದ ಅನ್ನಪೂರ್ಣಳೊಂದಿಗೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದ ಅವರು, ಭಾನುವಾರ ಮಧ್ಯಾಹ್ನ ಬ್ಯಾಂಕ್‌ನಿಂದ ಮದುವೆಗಾಗಿ ಒಡವೆಗಳನ್ನು ಕೂಡ ತಂದಿದ್ದರು.
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಮನೆಯಲ್ಲೊಬ್ಬರೇ ಇದ್ದ ವೇಳೆ ಅಪರಿಚಿತರು ಮನೆಗೆ ನುಗ್ಗಿ ಹತ್ಯೆಗೈದಿದ್ದಾರೆ. ಬಳಿಕ ಮನೆಯ ಬಾಗಿಲಿಗೆ ಚಿಲಕ ಹಾಕಿ ಪರಾರಿಯಾಗಿರುವುದು ತಿಳಿದುಬಂದಿದೆ.
ಈ ಘಟನೆ ನಾಳೆ ಮದುವೆಗೆಂದು ಸಂಬಂಧಿಕರು ಮನೆಗೆ ಬಂದಾಗ ಬೆಳಕಿಗೆ ಬಂದಿದೆ. ಬಾಗಿಲು ತೆಗೆಯದಿದ್ದರಿಂದ ಅನುಮಾನಗೊಂಡ ಸಂಬಂಧಿಕರು ಬಾಗಿಲು ಒಡೆದು ಒಳಗೆ ನುಗ್ಗಿದಾಗ ವೈದ್ಯರು ರಕ್ತದ ಕೆರೆಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ಮೃತ ರಮೇಶ್ ಕಲಗುಟಕರ ಅವರಿಗೆ ಇಬ್ಬರು ಮಕ್ಕಳು ಇದ್ದು, ಒಬ್ಬರು ಎಂ.ಬಿ.ಬಿ.ಎಸ್ ಪೂರ್ಣಗೊಳಿಸಿದ್ದರೆ, ಮತ್ತೊಬ್ಬರು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಸುಮಾರು 8 ತಿಂಗಳ ಹಿಂದೆ ಪತ್ನಿ ಸಾವನಪ್ಪಿದ್ದ ಹಿನ್ನೆಲೆಯಲ್ಲಿ ಅವರು ಒಬ್ಬರೇ ವಾಸಿಸುತ್ತಿದ್ದರು.
ಘಟನಾ ಸ್ಥಳಕ್ಕೆ ಸಿಪಿಐ ಶಶಿಕಾಂತ ವರ್ಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಈ ಘಟನೆ ಜಿಲ್ಲೆಯಲ್ಲೇ ಚರ್ಚೆಗೆ ಗ್ರಾಸವಾಗಿದ್ದು, ಮದುವೆಯ ಸಂಭ್ರಮದ ನಡುವೆಯೇ ನಡೆದ ಈ ದುರಂತ ಜನರಲ್ಲಿ ಆತಂಕ ಮೂಡಿಸಿದೆ.

