ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಸಣ್ಣ ವಿಷಯಕ್ಕೆ ಉಂಟಾದ ವಾಗ್ವಾದವು ಹಲ್ಲೆಗೆ ತಿರುಗಿ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಗಾಯಾಳುವನ್ನು ವಿಜಯ ತುಕಾರಾಮ ನಾಗೇಕರ (38), ಕಿನ್ನರ ನಿವಾಸಿ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಚಾಲಕರಾಗಿರುವ ಅವರು, ಪ್ರಸ್ತುತ ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸ್ ದೂರಿನ ಪ್ರಕಾರ, ಬುಧವಾರ ರಾತ್ರಿ ಸುಮಾರು 11:30ರ ವೇಳೆಗೆ ವಿಜಯ ಅವರು ಕಿನ್ನರ ಮಸೀದಿ ಸಮೀಪ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಹಿಂಬದಿಯಿಂದ ಟಿಪ್ಪರ್ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಚಾಲಕನಿಗೆ ನಿಧಾನವಾಗಿ ಚಲಾಯಿಸುವಂತೆ ತಿಳಿಸಿದ್ದಾರೆ. ಇದರಿಂದ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ.
ಈ ವೇಳೆ ಟಿಪ್ಪರ್ ಚಾಲಕನು ವಾಹನವನ್ನು ನಿಲ್ಲಿಸಿ ವಿಜಯ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾನೆ. ಬಳಿಕ ಆತ ಫೋನ್ ಮೂಲಕ ತನ್ನ ಪರಿಚಯದವರನ್ನು ಕರೆಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಇನ್ನೂ ನಾಲ್ವರು ಸ್ಥಳಕ್ಕೆ ಆಗಮಿಸಿದ್ದಾರೆ.
ಸ್ಥಳಕ್ಕೆ ಬಂದ ಮಂಜುನಾಥ ಬಾಂದೇಕರ, ಜೀವನ ಪವಾರ ಸೇರಿದಂತೆ ಇತರ ಆರೋಪಿತರು ವಿಜಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಂಜುನಾಥ ಬಾಂದೇಕರ ಅವರು ಯಾವುದೋ ಮಾರಕಾಸ್ತ್ರದಿಂದ ವಿಜಯ ಅವರ ಬೆನ್ನು ಹಾಗೂ ಸೊಂಟ ಭಾಗಕ್ಕೆ ಹೊಡೆದಿದ್ದು, ಜೀವನ ಪವಾರ ಅವರು ಕೈಯಿಂದ ಎಡಗಣ್ಣು ಹಾಗೂ ಕೈಗೆ ಹೊಡೆದು, ಕಾಲಿನಿಂದ ಒದ್ದಿದ್ದಾರೆ ಎನ್ನಲಾಗಿದೆ. ಇನ್ನುಳಿದ ಆರೋಪಿತರೂ ಸೇರಿಕೊಂಡು ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಲ್ಲೆಯಿಂದ ವಿಜಯ ಅವರ ಬೆನ್ನು, ಸೊಂಟ, ಕಣ್ಣು ಮತ್ತು ಕೈ ಭಾಗಗಳಿಗೆ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ವಿಜಯ ಅವರು ನೀಡಿದ ದೂರಿನ ಮೇರೆಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಟಿಪ್ಪರ್ ಚಾಲಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಇತರ ಆರೋಪಿತರ ಬಗ್ಗೆ ತನಿಖೆ ಮುಂದುವರಿದಿದೆ.

