ಕರಾವಳಿ ವಾಯ್ಸ್ ನ್ಯೂಸ್
ಕಾರವಾರ, ಏಪ್ರಿಲ್ 9: ಚರ್ಚ್ ಹಣ ದುರುಪಯೋಗದ ಕುರಿತು ನೀಡಿದ ದೂರನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಸಮಾಜಸೇವಕರೊಬ್ಬರ ಮೇಲೆ ಗುಂಪು ಸೇರಿ ಹಲ್ಲೆ ನಡೆಸಿದ ಘಟನೆ ಚಿತ್ತಾಕುಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ಈ ಸಂಬಂಧ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಫಿರ್ಯಾದಿದಾರರಾಗಿರುವ ಆಸಿಸ್ ಅಲಿಯಾಸ್ ಸಾವೇರ್ ಫರ್ನಾಂಡೀಸ್ (59), ಹಳಗಾ ಗ್ರಾಮದ ಚರ್ಚವಾಡಾ ನಿವಾಸಿಯಾಗಿದ್ದು, ಸಮಾಜಸೇವಕರಾಗಿ ಗುರುತಿಸಿಕೊಂಡಿದ್ದಾರೆ.
ಪೊಲೀಸ್ ದೂರಿನ ಪ್ರಕಾರ, ಗುರುವಾರ ರಂದು ಬೆಳಿಗ್ಗೆ 10.15ರಿಂದ 10.45ರ ನಡುವೆ, ಆರೋಪಿತರಾದ ಫುಲ್ಲರ್ ಅಪೋಲಿನ್ ಮಿನಿನ್ ಫರ್ನಾಂಡೀಸ್, ಜೋಸೆಫ್ ಥಾಮಸ್ ಫರ್ನಾಂಡೀಸ್, ಮೆಕ್ಸಿ ಎಂ.ಸಿ. ಅಪೋಲಿನ್ ಫರ್ನಾಂಡೀಸ್, ವಿಲ್ಸನ್ ಮಾರ್ಷಲ್ ಫರ್ನಾಂಡೀಸ್, ರೋಮಿ ಅಪೋಲಿನ್ ಫರ್ನಾಂಡೀಸ್ ಹಾಗೂ ರಿಂಕೊ ಫುಲ್ಲರ್ ಫರ್ನಾಂಡೀಸ್ ಸೇರಿ ಫಿರ್ಯಾದಿದಾರರ ಮನೆಗೆ ತೆರಳಿದ್ದಾರೆ.
ಈ ವೇಳೆ “ಚರ್ಚ್ ಹಣ ದುರುಪಯೋಗ ಕುರಿತು ಲೋಕಾಯುಕ್ತರಿಗೆ ನೀಡಿದ ದೂರನ್ನು ಹಿಂತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದಕ್ಕೆ ಫಿರ್ಯಾದಿದಾರರು ನಿರಾಕರಿಸಿದ ಹಿನ್ನೆಲೆ, ಆರೋಪಿತರಲ್ಲಿ ಕೆಲವರು ಮನೆ ಒಳಗೆ ನುಗ್ಗಿ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಕೈ ಹಿಡಿದು ಎಳೆದು, ಹೊಡೆದು, ಕಾಲಿನಿಂದ ಒದ್ದಿದ್ದು, ನೆಲಕ್ಕೆ ದೂಡಿ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಲ್ಲೆಯ ವೇಳೆ ಫಿರ್ಯಾದಿದಾರರ ಕನ್ನಡಕವನ್ನು ಒಡೆದು ಹಾನಿಗೊಳಪಡಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿ ಆರೋಪಿತರು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಗಾಯಗೊಂಡ ಫಿರ್ಯಾದಿದಾರರು ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ದೂರಿನ ಮೇರೆಗೆ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.

