ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ನಗರದ ಕಾಜುಬಾಗ ಮುಖ್ಯರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್ ಒಂದರಲ್ಲಿ ಕಳ್ಳರು ಬಾಗಿಲಿನ ಕೊಂಡಿ ಮುರಿದು ಒಳನುಗ್ಗಿ ಸಾವಿರಾರು ರೂಪಾಯಿ ನಗದು ಹಣ ಕದ್ದೊಯ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Banner Ad

ಕಾಜುಬಾಗದ ‘ರಾಯಲ್ ಎಂಬಸಿ’ ಅಪಾರ್ಟ್‌ಮೆಂಟ್‌ನ ಫ್ಲಾಟ್ ನಂ. 301ರಲ್ಲಿ ವಾಸವಾಗಿರುವ, ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ಸೂರಜ್ ನಾರಾಯಣ ಜೋಗಳೇಕರ (54) ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.

ದೂರಿನನ್ವಯ, ಮಾರ್ಚ್ 28ರ ರಾತ್ರಿ 10 ಗಂಟೆಯಿಂದ ಏಪ್ರಿಲ್ 4ರ ಮುಂಜಾನೆ 4 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳರು ಕೃತ್ಯ ಎಸಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಮುಖ್ಯ ಬಾಗಿಲಿನ ಕೊಂಡಿ ಮುರಿದು ಒಳನುಗ್ಗಿ, ಮನೆಯಲ್ಲಿದ್ದ ತಿಜೋರಿಯನ್ನು ಜಾಲಾಡಿ ಅಂದಾಜು 65,000 ರೂ. ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಹಣ ಕಳುವಾಗಿರುವುದು ತಿಳಿದ ಬಳಿಕ, ಸೂರಜ್ ಅವರು ಮೊದಲು ಮನೆಯಲ್ಲಿ ಹುಡುಕಾಡಿ, ನಂತರ ಅಕ್ಕಪಕ್ಕದವರಲ್ಲಿ ವಿಚಾರಣೆ ನಡೆಸಿದ್ದಾರೆ. ಆದರೆ ಹಣ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಆಧಾರದಲ್ಲಿ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಲಂ 331(3), 331(4) ಹಾಗೂ 305ರಡಿ ತನಿಖೆ ಆರಂಭಿಸಲಾಗಿದೆ. ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ಅಪಾರ್ಟ್‌ಮೆಂಟ್ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

Please Share: