ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಭಟ್ಕಳದಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ವ್ಯಕ್ತಿಯೊಬ್ಬರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಗ್ದುಂಕಾಲೋನಿ ನಿವಾಸಿ ಹಸನ್ ಸಾಬೀರ್ ಸಿದ್ದಿಬಾಪಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮೂಸಾನಗರದ ನಿವಾಸಿ ಈಶ್ರತ್ ಜಹಾ (38) ಅವರು ನೀಡಿದ ದೂರಿನ ಮೇರೆಗೆ, ಅವರ 15 ವರ್ಷದ ಪುತ್ರನ ಮೇಲೆ ಹಲ್ಲೆ ನಡೆದಿರುವುದಾಗಿ ಆರೋಪಿಸಲಾಗಿದೆ.
ದೂರಿನ ಪ್ರಕಾರ, ಮನೆಯ ಪಕ್ಕದ ಬಾಲಕಿಯೊಂದಿಗೆ ಮಾತನಾಡುತ್ತಿದ್ದ ವಿಚಾರಕ್ಕೆ ಆಕ್ರೋಶಗೊಂಡ ಆರೋಪಿತನು, ಮಾ.12ರಂದು ಬೆಳಿಗ್ಗೆ ಸುಮಾರು 6 ಗಂಟೆ ಸುಮಾರಿಗೆ ಬಾಲಕನನ್ನು ಜಾಲಿ ಬೀಚ್ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಬಾಲಕನ ಕೆನ್ನೆಗೆ ಹಲವು ಬಾರಿ ಹೊಡೆದು, ಕಿವಿಗಳಿಗೆ ಗಾಯವಾಗುವಂತೆ ಪೆಟ್ಟು ನೀಡಿರುವುದಲ್ಲದೆ, ಮೊಬೈಲ್ ಚಾರ್ಜರ್ ಕೇಬಲ್ನಿಂದ ಹೊಡೆದು ದೇಹದ ಮೇಲೂ ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ, ಘಟನೆ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡಿ ಸಮುದ್ರಕ್ಕೆ ಬಿಸಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
