ಕರಾವಳಿ ವಾಯ್ಸ್ ನ್ಯೂಸ್
ಹೊನ್ನಾವರ: ಯಾತ್ರಿಕರ ಬಸ್ ಚಾಲಕನ ಮೇಲೆ ಕಟ್ಟಿಗೆ ಬಡಿಗೆಯಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ತಾಲೂಕಿನ ಗೇರುಸೊಪ್ಪಾ ಮಾರ್ಗದ ಮಾಸ್ತಿಮನೆ ದೇವಸ್ಥಾನದ ಬಳಿ ನಡೆದಿದ್ದು, ಈ ಸಂಬಂಧ ಮೂವರು ಆರೋಪಿಗಳ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರು ನೀಡಿದವರು ಮಹಾರಾಷ್ಟ್ರದ ಔರಂಗಾಬಾದ್ ಮೂಲದ ಸಂದೀಪ್ ತಂದೆ ಶ್ರೀಮಂತ ಆರ್ಗಡೆ (36) ಆಗಿದ್ದು, ಅವರು ವೃತ್ತಿಯಲ್ಲಿ ಬಸ್ ಚಾಲಕರಾಗಿದ್ದಾರೆ. ದೂರಿನ ಪ್ರಕಾರ, ಸಂದೀಪ್ ಅವರು ಏಜೆಂಟ್ ಮೂಲಕ 40 ಯಾತ್ರಿಕರನ್ನು ಮೈಸೂರು, ಮಧುರೈ, ಕನ್ಯಾಕುಮಾರಿ, ರಾಮೇಶ್ವರಂ, ತಿರುಪತಿ ಹಾಗೂ ಶ್ರೀಶೈಲಂ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು.
ಬುಧವಾರ ಗೋಕರ್ಣ ದರ್ಶನದ ಬಳಿಕ ಮೈಸೂರಿನತ್ತ ಪ್ರಯಾಣಿಸುತ್ತಿದ್ದ ವೇಳೆ, ಗೇರುಸೊಪ್ಪಾ ಮಾರ್ಗದ ಮಾಸ್ತಿಮನೆ ದೇವಸ್ಥಾನದ ಬಳಿ ಬಸ್ ನಿಲ್ಲಿಸಿ ಯಾತ್ರಿಕರು ಅಡಿಗೆ ಮಾಡಿಕೊಂಡಿದ್ದರು. ಇದೇ ವೇಳೆ ಮತ್ತೊಂದು ಯಾತ್ರಿಕರ ಬಸ್ ಅಲ್ಲಿಗೆ ಬಂದು ನಿಂತಿದ್ದು, ಪರಿಚಿತರೊಂದಿಗೆ ಮಾತನಾಡುವ ಸಂದರ್ಭ ಮಾತಿನ ಚಕಮಕಿ ಉಂಟಾಗಿದೆ.
ಈ ವೇಳೆ ಅಂಕುಶ ತಂದೆ ಶ್ರೀರಾಮ ಜಗತಾಪ್ (54), ರಾಜು ತಂದೆ ಏಕನಾಥ ಲಂಕೆ (60) ಹಾಗೂ ಗೋಪಾಲ್ ತಂದೆ ಕಿಶನ್ ರಾವುತ್ (50) ಎಂಬವರು ಸಂದೀಪ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮುಖ್ಯ ಆರೋಪಿತ ಅಂಕುಶ ಜಗತಾಪ್ ಕಟ್ಟಿಗೆ ಬಡಿಗೆಯಿಂದ ಸಂದೀಪ್ ಅವರ ಕಾಲಿಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾನೆ ಎನ್ನಲಾಗಿದೆ.
ಇನ್ನಿಬ್ಬರು ಆರೋಪಿತರು ಸಹ ಕೈಯಿಂದ ಹಲ್ಲೆ ನಡೆಸಿ ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಸಂದೀಪ್ ಅವರನ್ನು ಕಾರವಾರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
