ಕರಾವಳಿ ವಾಯ್ಸ್ ನ್ಯೂಸ್
ಬೆಂಗಳೂರಿನಿಂದ ಕಾರವಾರಕ್ಕೆ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊರಟಿದ್ದ ಖಾಸಗಿ ಕಂಪನಿಯ ಬಸ್ ಉರುಳಿಬಿದ್ದ ಘಟನೆ ಹಾವೇರಿ ತಾಲೂಕಿನ ಮೋಟೆಬೆನ್ನೂರು ಸಮೀಪ ಗುರುವಾರ ನಡೆದಿದೆ.
ಕೆಎ 01 ಎಎಸ್ 9746 ಸಂಖ್ಯೆಯ ಬಸ್ಸಿನಲ್ಲಿ ಒಟ್ಟು 22 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಚಾಲಕ ಅತಿವೇಗದಲ್ಲಿ ಬಸ್ ಚಲಾಯಿಸಿದ್ದರಿಂದ ಹಾಗೂ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಹೆದ್ದಾರಿಯ ಮೋಟೆಬೆನ್ನೂರು ಬಳಿಯ ಫೇಸ್ ಕಾಲೇಜು ಎದುರು ಬಸ್ ಏಕಾಏಕಿ ನಿಯಂತ್ರಣ ತಪ್ಪಿ ಉರುಳಿಬಿದ್ದಿತು. ಅವಘಡ ಸಂಭವಿಸಿದ ಕ್ಷಣದಲ್ಲೇ ಬಸ್ಸಿನಲ್ಲಿದ್ದ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಉರುಳಿಬಿದ್ದ ಬಸ್ಸಿನಿಂದ ಹಲವರು ಸ್ವಯಂವಾಗಿ ಹೊರಬಂದರೆ, ಕೆಲವರು ಒಳಗೆ ಸಿಲುಕಿಕೊಂಡಿದ್ದರು. ಅವರನ್ನು ಹೊರತೆಗೆದಲು ಸಹ ಪ್ರಯಾಣಿಕರು ಹಾಗೂ ಸ್ಥಳೀಯರು ಪ್ರಯತ್ನಿಸಿದರು.
“ಚಾಲಕ ನಿದ್ದೆ ಮಂಪರಿನಲ್ಲಿ ಇದ್ದಂತೆ ಕಂಡುಬಂತು. ಬಸ್ ಅತಿವೇಗದಲ್ಲಿ ಚಲಿಸುತ್ತಿದ್ದು, ಅಚಾನಕ್ ನಿಯಂತ್ರಣ ತಪ್ಪಿ ಉರುಳಿಬಿತ್ತು” ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.
ಘಟನೆಯ ಕುರಿತು ಸಂಬಂಧಿತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
