ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಹೋಳಿ ಹಬ್ಬದ ಪ್ರಯುಕ್ತ ಸಮುದ್ರ ಸ್ನಾನಕ್ಕೆ ತೆರಳಿದ್ದ ಯುವಕರ ಗುಂಪಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಘಟನೆ ಕಾರವಾರದ ಹನುಮಾನ್ ಮೂರ್ತಿ ಬೀಚ್ ದಂಡೆಯಲ್ಲಿ ನಡೆದಿದೆ. ಈ ಸಂಬಂಧ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಕಳೇಶಿಟ್ಟಾ ಬಾಡ ನಿವಾಸಿ, ಸಿವಿಲ್ ಆಸ್ಪತ್ರೆ ಉದ್ಯೋಗಿ ಅಕ್ಷಯ್ ವಿನಾಯಕ ನಾಯ್ಕ (26) ದೂರು ನೀಡಿದವರು. ಬುಧವಾರ (ಮಾರ್ಚ್ 4) ಸಂಜೆ 5:00 ಗಂಟೆ ಸುಮಾರಿಗೆ ಅಕ್ಷಯ್ ತಮ್ಮ ಸ್ನೇಹಿತರಾದ ಗಜೇಂದ್ರ ಬಿಣಗೇಕರ್, ರಾಹುಲ್ ಬೆಂಗೇಂಜಾ ಮತ್ತು ಕೃಷ್ಣ ನಾಯ್ಕ ಅವರೊಂದಿಗೆ ಹೋಳಿ ಆಚರಿಸಿ, ಸಮುದ್ರ ಸ್ನಾನಕ್ಕಾಗಿ ಹನುಮಾನ್ ಮೂರ್ತಿ ಬೀಚ್‌ಗೆ ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದ ಖಾರ್ವಿವಾಡದ ಲೋಹಿತ್, ವೀರು ಅಲಿಯಾಸ್ ವೀರನ್ ಬಾನಾವಳಿ ಮತ್ತು ಅವರ ಇನ್ನೊಬ್ಬ ಸ್ನೇಹಿತ, ಹಳೆಯ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಗಜೇಂದ್ರನನ್ನು ಅಡ್ಡಗಟ್ಟಿ ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಗೆಳೆಯನ ಮೇಲಿನ ಹಲ್ಲೆಯನ್ನು ತಡೆಯಲು ಅಕ್ಷಯ್, ರಾಹುಲ್ ಮತ್ತು ಕೃಷ್ಣ ಮುಂದಾಗಿದ್ದಾರೆ. ಆಗ ಆರೋಪಿಗಳು ಎಲ್ಲರ ಮೇಲೂ ಮುಗಿಬಿದ್ದಿದ್ದಾರೆ. ಆರೋಪಿ ಲೋಹಿತ್ ಸಿಟ್ಟಿನಿಂದ ಮರದ ಕಟ್ಟಿಗೆಯನ್ನು ತಂದು ರಾಹುಲ್ ಮತ್ತು ಗಜೇಂದ್ರನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಇಬ್ಬರಿಗೂ ತೀವ್ರ ರಕ್ತಗಾಯಗಳಾಗಿವೆ. ಅಲ್ಲದೆ, ಹೋಗುವಾಗ “ಇನ್ನೊಮ್ಮೆ ಸಿಕ್ಕರೆ ನಿಮ್ಮನ್ನು ಕೊಲೆ ಮಾಡುತ್ತೇವೆ” (ಅನಿ ಮೇಳೂ ದಾಕೇತಾ ತುಮ್ನಕಾ ಮಾರನ್ ಉಡೇತಾ) ಎಂದು ಜೀವಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ, ಅಕ್ಷಯ್ ಅವರು ಬುಧವಾರ ರಾತ್ರಿ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರಿನ ಅನ್ವಯ, ಆರೋಪಿಗಳಾದ ಲೋಹಿತ್, ವೀರು ಮತ್ತು ಆತನ ಸ್ನೇಹಿತನ ವಿರುದ್ಧ ಬಿಎನ್‌ಎಸ್-2023 ಕಾಯ್ದೆಯಡಿ ಕಲಂ 126(2), 115(2), 118(1), 351(2) ಸಹಿತ 3(5) ರನ್ವಯ ಪ್ರಕರಣ ದಾಖಲಿಸಿಕೊಂಡಿರುವ ಶಹರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
